ಚಿಕ್ಕಮಗಳೂರು: ಜಿಲ್ಲೆಯ ಕರೊನಾ ಸೋಂಕು ಪ್ರಮಾಣ ಶೇ.5ಕ್ಕೆ ಇಳಿಯುವವರೆಗೆ ಹೋಟೆಲ್, ರೆಸ್ಟೋರೆಂಟ್, ಮಾಲ್, ಸೂಪರ್ ಮಾರ್ಕೇಟ್, ಧಾರ್ಮಿಕ ಸ್ಥಳಗಳು ಹೀಗೆ ಹೆಚ್ಚು ಜನ ಸೇರುವ ವಲಯಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಖಡಕ್ ಆಗಿ ಹೇಳಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರೊನಾ ಮೂರನೇ ಅಲೆಯ ಮುಂಜಾಗ್ರತಾ ಕ್ರಮ ಮತ್ತು ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೌರಿಕರು ಸೇರಿ ಇತರ ದುರಸ್ತಿ ಕಾರ್ಯಗಳಿಗೆ ಪೂರಕವಾದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
3ನೇ ಅಲೆ ಎದುರಿಸಲು ಸಜ್ಜಾಗಿ:
ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲೂಕುಗಳಲ್ಲಿ ಕರೊನಾ ಪಾಸಿಟಿವ್ ದರ ಅಧಿಕವಾಗಿದೆ. ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು. ತಾಲೂಕು ಕೇಂದ್ರಗಳಲ್ಲಿ ಪಾಸಿಟಿವ್ ದರ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಕರೊನಾ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಮೂರನೇ ಅಲೆಗೆ ಸಂಬಂಧಿಸಿದಂತೆ ತಜ್ಞರ ಜತೆ ಸಮಾಲೋಚಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಯಾವುದೇ ಅವಶ್ಯಕತೆ ಮತ್ತು ಬೇಡಿಕೆಗಳಿದ್ದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಅವರು, ಕಾಮಗಾರಿ ಪ್ರಗತಿ ಹಂತದಲ್ಲಿರುವುದರಿಂದ ವೈದ್ಯಕೀಯ ಕಾಲೇಜು ಆರಂಭಿಸಲು ಪೂರಕವಾದ ವ್ಯವಸ್ಥೆ ಜತೆಗೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮಾಸ್ಕ್ ಧರಿಸುವುದು ಕಡ್ಡಾಯ:
ಜಿಲ್ಲೆಯಲ್ಲಿ ಲಸಿಕೆ ವಿತರಣೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಂಡು ಲಸಿಕೆ ನೀಡುವ ಪ್ರಮಾಣ ಹೆಚ್ಚಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಯಾದರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸದಿದ್ದಲ್ಲಿ ದಂಡ ವಿಧಿಸಬೇಕು. ಚೆಕ್‍ಪೋಸ್ಟ್ ಗಳಲ್ಲಿ ಹೆಚ್ಚು ನಿಗಾ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಪಂ ಸಿಇಒ ಎಸ್.ಪೂವಿತಾ, ಎಸ್ಪಿ ಎಂ.ಎಚ್.ಅಕ್ಷಯ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ವೈದ್ಯಕೀಯ ಕಾಲೇಜಿನ ಉಸ್ತುವಾರಿ ಪ್ರೊ.ಮೀರಾ, ಡಿಎಚ್‍ಒ ಡಾ.ಎಸ್.ಎನ್.ಉಮೇಶ್, ಜಿಲ್ಲಾ ಸರ್ಜನ್ ಡಾ. ಸಿ.ಮೋಹನ್‍ಕುಮಾರ್, ಆರ್ ಸಿ ಎಚ್ ಡಾ. ಭರತ್‍ಕುಮಾರ್ ಇತರರಿದ್ದರು.