ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹೋಟೆಲ್ ಮಾಲೀಕರು, ಲಾಡ್ಜ್, ತಿಂಡಿ ಗಾಡಿಗಳ ಮಾಲೀಕರ ಸಭೆ ನಡೆಯಿತು. ಬಿ.ಸಿ.ಬಸವರಾಜ್, ಅನು ಮಧುಕರ್, ಲೋಕೇಶ್, ವೆಂಕಟೇಶ್, ಈಶ್ವರ್, ನಾಗಪ್ಪ ಮತ್ತಿತರರಿದ್ದರು. 
ಜಿಲ್ಲೆ

ಹೋಟೆಲ್ ಮಾಲೀಕರು ಸ್ವಚ್ಚತೆ ಕಾಪಾಡಿ

ಚಿಕ್ಕಮಗಳೂರು: ಕೋವಿಡ್ ಮಹಾಮಾರಿ ಪುನಃ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗೆ ಗ್ರಾಹಕರು, ಸಾರ್ವಜನಿಕರು ಬಂದಾಗ ಸ್ವಚ್ಛತೆ ಮತ್ತು ಅಂತರ ಕಾಪಾಡುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಕೋವಿಡ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮನವಿ ಮಾಡಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಕರೆಯಲಾಗಿದ್ದ ಹೋಟೆಲ್ ಮಾಲೀಕರು, ಲಾಡ್ಜ್, ತಿಂಡಿ ಗಾಡಿಗಳ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೋಟೆಲ್‌ನಲ್ಲಿ ನೀರು ಸಂಗ್ರಹಗಾರಗಳ ಮುಚ್ಚಳ ಮುಚ್ಚಿರಬೇಕು. ದಿನಕ್ಕೆ ಎರಡು ಬಾರಿ ಫಿನಾಯಲ್ ಹಾಕಿ ಹೋಟೆಲ್ ನೆಲವನ್ನು ಸ್ವಚ್ಛಗೊಳಿಸಬೇಕು. ಈ ಬಗ್ಗೆ ಹೋಟೆಲ್, ಲಾಡ್ಜ್ ಮಾಲೀಕರು ತಮ್ಮ ಸಿಬ್ಬಂದಿಗೆ ಜಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಒಳ್ಳೆಯ ಆಹಾರ ಆರೋಗ್ಯಕ್ಕೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರ ಆರೋಗ್ಯವನ್ನು ಕಾಪಾಡುವಲ್ಲಿ ಹೋಟೆಲ್ ಮಾಲೀಕರು ಶುಚಿ-ರುಚಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಪ್ರಕೃತಿ ವೀಕ್ಷಣೆಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಯನ್ನು ಬಳಸುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ನಗರದ ನಾಗರಿಕರು ಹಸಿ ಕಸ, ಒಣ ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಿದ ಪರಿಣಾಮ ಕಸ ವಿಲೇವಾರಿಯಿಂದ ನಗರಸಭೆಗೆ ೧೦.೫೦ ಲಕ್ಷ ರೂ. ಆದಾಯ ಬಂದಿದೆ. ಇದಕ್ಕೆ ಸಾರ್ವಜನಿಕರ ಸಹಬಾಗಿತ್ವ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಹೋಟೆಲ್ ಮಾಲೀಕರು ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ನಗರಸಭೆಯಲ್ಲಿ ಸಭೆ ನೆಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೋಟೆಲ್‌ನಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲ ಮಾಲೀಕರ ಕರ್ತವ್ಯ ಎಂದು ಹೇಳಿದರು.

ಪ್ಲಾಸ್ಟಿಕ್ ಕವರುಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸಲ್ ಕೊಡುತ್ತಿರುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ತಕ್ಷಣ ಹೋಟೆಲ್ ಮತ್ತು ಲಾಡ್ಜ್ಗಳಲ್ಲಿ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಸಂಪೂರ್ಣ ನಿಷೇದಿಸಿ ಸಹಕರಿಸಬೇಕು ಎಂದರು.

ಲಾಡ್ಜ್, ಹೋಟೆಲ್, ಅಪಾರ್ಟ್ಮೆಂಟ್‌ನಲ್ಲಿ ನಗರಸಭೆ ನಿಬಂಧನೆಗಳನ್ನು ಪಾಲನೆ ಮಾಡುತ್ತಿಲ್ಲ. ಜೊತೆಗೆ ಪರವಾನಗಿಯನ್ನು ಪಡೆದುಕೊಂಡಿಲ್ಲ. ಸೂಚನೆ ಪತ್ರ ಕೊಡಲು ಅವಕಾಶ ಕೊಡದೆ ಅರ್ಜಿಯನ್ನು ಸಲ್ಲಿಸಿದ ೧ ವಾರದಲ್ಲಿ ಪರವಾನಿಗೆ ಕೊಡುತ್ತೇವೆ ಎಂದರು.

ಹೋಟೆಲ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣಕಸವನ್ನಾಗಿ ವಿಂಗಡಿಸಿ ನೀಡುವ ಮೂಲಕ ನಗರಸಭೆಯೊಂದಿಗೆ ಕೈ ಜೊಡಿಸಬೇಕು ಎಂದು ಮನವಿ ಮಾಡಿದರು.

ಸಂಚಾರಿ ಠಾಣೆ ಪೊಲೀಸ್ ಅಧಿಕಾರಿ ಧನಂಜಯ್ ಮಾತನಾಡಿ, ನಗರದಲ್ಲಿ ಎಲ್ಲ ರಸ್ತೆಗಳು ಕಿರಿದಾಗಿವೆ. ಇಂಥ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡದೆ ಲಾಡ್ಜ್ ಮತ್ತು ಹೋಟೆಲ್‌ನಲ್ಲಿ ತಂಗಿರುವವರು ಅಲ್ಲಿಯೇ ಪಾರ್ಕಿಂಗ್ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ನಗರದ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ದ್ವಿ-ಚಕ್ರ, ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಅಂತರ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಶಿಕ್ಷಣ, ಪರಿಸರ, ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಇಂಜಿನಿಯರ್ ಲೋಕೇಶ್,ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವ್ಯವಸ್ಥಾಪಕರಾದ ರವಿ, ಸ್ಯಾನಿಟೈಸೇಷನ್ ಸೂಪರ್‌ವೈಸರ್‌ಗಳಾದ ಅಣ್ಣಯ್ಯ, ಶ್ರೀನಿವಾಸ್, ವಿವೇಕ್, ಸತೀಶ್, ಹೋಟೆಲ್ ಮಾಲೀಕರು ಉಪಸ್ಥಿತರಿದ್ದರು.