ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯ ಸೇರಿ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿಯ ಮೂರನೇ ಅಲೆ ವ್ಯಾಪಿಸುತ್ತಿದೆ. ಹೆಚ್ಚು ಅಪಾಯಕಾರಿ ಅಲ್ಲದ ಮೂರನೇ ಅಲೆಯಲ್ಲಿ ಸೋಂಕಿತರಿಗೆ ಹೋಂ ಕ್ವಾರಂಟೈನ್ ಎಂಬುದು ಆಟವಾಗಿದೆ.
ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಸೋಂಕಿತರ ಪ್ರಮಾಣ ಸಾವಿರ ಗಡಿ ದಾಟಿದೆ. ಇವರಲ್ಲಿ 700 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ ಹೋಂ ಕ್ವಾರಂಟೈನ್‌ಗೆ ಬಿಗಿ ನಿಯಮಗಳು ಇಲ್ಲದ ಕಾರಣ ಆರಾಮವಾಗಿ ಓಡಾಡಿಕೊಂಡಿರುವ ಸೋಂಕಿತರು ಸೋಂಕು ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚು ಗಮನಹರಿಸುತ್ತಿಲ್ಲ. ಇದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.
ಮೊದಲೆರಡು ಅಲೆಗಳಲ್ಲಿ ಸೋಂಕಿತರು ಪತ್ತೆ ಆಗುತ್ತಿದ್ದಂತೆ ಅವರನ್ನು ಕಟ್ಟುನಿಟ್ಟಾಗಿ ಹೋಂ ಕ್ವಾರಂಟೈನ್ ಮಾಡಲಾಗುತ್ತಿತ್ತು. ಆಗ ಸೋಂಕಿತ ವ್ಯಕ್ತಿ ಮತ್ತು ಆತನ ಸಂಪರ್ಕಿತರು ಮನೆಯಿಂದ ಹೊರಗೆ ಬರದಂತೆ ಕ್ರಮ ಕೈಗೊಳ್ಳಲಾಗುತ್ತಿತ್ತು. ಇದಕ್ಕಾಗಿ ಗ್ರಾಪಂ ಮಟ್ಟದಲ್ಲೇ ತಂಡಗಳನ್ನು ರಚಿಸಿ, ತೀವ್ರ ನಿಗಾ ಇಡಲಾಗುತ್ತಿತ್ತು. ಒಂದು ವೇಳೆ ನಿಯಮ ಉಲ್ಲಂಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗುತ್ತಿತ್ತು.
ಅದರೆ ಈ ಬಾರಿ ಇಂಥ ಯಾವುದೇ ಕಠಿಣ ನಿಯಮಗಳು ಕಾಣಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಂತೂ ಸೋಂಕಿತರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮಾತನ್ನು ಕೇಳಲು ಸುತಾರಾಂ ಸಿದ್ಧರಿಲ್ಲ. ಸೋಂಕಿತ ವ್ಯಕ್ತಿ ಮನೆಯಲ್ಲಿ ಇರದೆ ಊರೆಲ್ಲಾ ಓಡಾಡಿಕೊಂಡು ಸೋಂಕು ಹರಡಿಸುತ್ತಿದ್ದಾನೆ.
ಅಧಿಕಾರಿಗಳೂ ಬೇಕಿಲ್ಲ: ಆರೋಗ್ಯ ಇಲಾಖೆ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಕೊಡಬಹುದೇ ಹೊರತು ಸೋಂಕಿತರನ್ನು ಕಾಯುವಂತೆ ಮಾಡಲಾಗದು. ಈ ಕೆಲಸವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ನಿರ್ವಹಿಸಬೇಕು. ಆದರೆ ಈ ಸಂಸ್ಥೆಗಳ ಅಧಿಕಾರಿಗಳು ಸರ್ಕಾರದ ಆದೇಶ ಇಲ್ಲ ಎಂಬ ನೆಪ ಹೇಳಿ ಹೋಂ ಐಸೋಲೇಷನ್‌ನಲ್ಲಿ ಇರುವವರು ಸಾರ್ವಜನಿಕವಾಗಿ ಓಡಾಡದಂತೆ ತಡೆಯಲು ಕ್ರಮ ಕೈಗೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವ ದೂರುಗಳು ಬರುತ್ತಿವೆ.
ಜಿಲ್ಲಾಡಳಿತ ಕ್ರಮವಹಿಸಬೇಕು: ಸೋಂಕು ದಿನೇದಿನೆ ಹೆಚ್ಚುತ್ತಿದೆ. ಸದ್ಯದ ಮಟ್ಟಿಗೆ ಒಂದು ಸಾವಿರ ಸೋಂಕಿತರು ಇದ್ದಾರೆ. ಇವರಲ್ಲಿ 700 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಹೋಂ ಐಸೋಲೇಷನ್‌ನಲ್ಲಿ ಇರುವವರ ಮೇಲೆ ತೀವ್ರ ನಿಗಾ ಇಡಬೇಕಿದೆ. ಇಲ್ಲವಾದರೆ ಹೆಚ್ಚಿನ ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
25 ಮಂದಿ ಸೋಂಕು: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 25 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ. ಜಿಲ್ಲೆಯ 700 ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡವರು ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಸಾಕಷ್ಟು ಮಂದಿ ಪರೀಕ್ಷೆಗೆ ಒಳಗಾಗಿದ್ದು, ಇವರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
108 ವಿದ್ಯಾರ್ಥಿಗಳು ಪಾಸಿಟಿವ್: ಜಿಲ್ಲೆಯಲ್ಲಿ ಸೋಮವಾರದ ಅಂತ್ಯಕ್ಕೆ ಸರ್ಕಾರಿ ಶಾಲೆಯ ಒಟ್ಟು 108 ಮಕ್ಕಳು ಸೋಂಕಿತರಾಗಿದ್ದಾರೆ. ಇವರೊಂದಿಗೆ 33 ಶಿಕ್ಷಕರಲ್ಲೂ ಸೋಂಕು ದೃಢಪಟ್ಟಿದೆ. ಬಹುತೇಕ ಶಾಲೆಗಳಿಗೆ ಬರುವ ಶಿಕ್ಷಕರು ಬೆಂಗಳೂರಿನಿಂದ ಬರುವವರೇ ಆಗಿದ್ದಾರೆ. ಇದು ಕೂಡ ಮಕ್ಕಳಲ್ಲಿ ಸೋಂಕು ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ.
ಸರ್ಕಾರ ಹೋಂ ಐಸೋಲೇಷನ್‌ನಲ್ಲಿ ಇರುವ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡುತ್ತಿಲ್ಲ. ಇದರಿಂದ ಸೋಂಕು ಮತ್ತಷ್ಟು ಹರಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ಗಾಣಕಲ್ ನಟರಾಜ್, ತಾಪಂ ಮಾಜಿ ಅಧ್ಯಕ್ಷ ಸರ್ಕಾರದಿಂದ ನಮಗೆ ಯಾವುದೇ ಸೂಚನೆಗಳು ಬಂದಿಲ್ಲ. ಯಾವುದೇ ವ್ಯಕ್ತಿಯ ಮೇಲೆ ನಿಗಾ ಇಡಲು ಸರ್ಕಾರದ ಮಾರ್ಗದರ್ಶನ ಕಡ್ಡಾಯ. ಆರ್ಥಿಕ ನೆರವೂ ಬೇಕಾಗುತ್ತದೆ. ಹೆಸರು ಹೇಳಲಿಚ್ಛಿಸದ ಗ್ರಾಪಂ ಅಧಿಕಾರಿ