ಕೋಲಾರ: ಕರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಜಿಲ್ಲಾಡಳಿತಕ್ಕೆ ಸೂಚಿಸಿದರು.
ನಗರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ, ಇಟಿಸಿಎಂ ಆಸ್ಪತ್ರೆಯ ಲಸಿಕಾ ಕೇಂದ್ರಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸ್ಯಾನಿಟೋರಿಯಂನಲ್ಲಿರುವ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕರೊನಾ ಸ್ಥಿತಿ-ಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಒಟ್ಟು 8077 ಸಕ್ರಿಯ ಪ್ರಕರಣಗಳ ಪೈಕಿ 433 ಮಂದಿ ಕೋವಿಡ್ ಕೇರ್ ಸೆಂಟರ್, 219 ಮಂದಿ ಕೋವಿಡ್ ಹೆಲ್ತ್ ಸೆಂಟರ್, 544 ಮಂದಿ ಜಿಲ್ಲಾ, ತಾಲೂಕು ಸರ್ಕಾರಿ ಆಸ್ಪತ್ರೆ, ಹಾಗೂ 78 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿದ್ದರೆ 6803 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿಗಳು, ಹೋಂ ಐಸೋಲೇಷನ್‌ನಲ್ಲಿರುವವರು ಒಂದೇ ಮನೆಯಲ್ಲೇ ವಾಸವಿರುವುದರಿಂದ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರಿಗೂ ಸೋಂಕು ಹರಡಲು ಕಾರಣವಾಗಿದೆ, ಸೋಂಕಿತರು ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಿಲ್ಲ, ಇದನ್ನು ತಡೆಯದಿದ್ದರೆ ಕರೊನಾ ನಿಯಂತ್ರಣ ಸಾಧ್ಯವಿಲ್ಲ. ಈ ಕೂಡಲೇ ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನಿಲ್ಲಿಸಿ ಎಂದು ಸೂಚನೆ ನೀಡಿದರು.
ಸೋಂಕಿತರಿಗೆ ಆಕ್ಸಿಜನ್ ಬೆಡ್, ಐಸಿಯು ನೀಡಿಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ದೂರು ಬರದಂತೆ ಎಚ್ಚರವಹಿಸಿ. ಸೋಂಕಿತರ ಸಂಖ್ಯೆ ಕಡಿಮೆಯಾಗಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಸೋಂಕು ಹರಡುವಿಕೆ ತಡೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆ ಹೆಚ್ಚಿಸಬೇಕು, ಸೋಂಕಿತರ ಪ್ರಾಥಮಿಕ ಸಂಪರ್ಕ ಇರುವವರಿಗೆ ಟೆಸ್ಟ್ ಕಡ್ಡಾಯಗೊಳಿಸಿ. ಕೋವಿಡ್ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಿ, ಲಸಿಕೆ ಅಗತ್ಯವಿದ್ದರೆ ಗಮನಕ್ಕೆ ತನ್ನಿ ಎಂದರು. ಸೋಂಕಿನ ಸರಪಳಿ ಕತ್ತರಿಸಲು ಲಾಕ್‌ಡೌನ್ ಪ್ರಮುಖ ಅಸ್ತ್ರ. ಅಂತರ ಜಿಲ್ಲೆಗಳಿಂದ ಬರುವವರಿಗೆ ಕಡಿವಾಣ ಹಾಕಿ, ಗಡಿಯಲ್ಲಿ ಎಚ್ಚರವಹಿಸಿ, ಅನಗತ್ಯ ಓಡಾಟಕ್ಕೆ ತಡೆ ನೀಡಿ ಕಾನೂನು ಕ್ರಮ ಕೈಗೊಳ್ಳಿ ಎಂದು ಡಿಸಿ ಮತ್ತು ಎಸ್ಪಿಗೆ ಸೂಚಿಸಿದರು.
ವೈದ್ಯ ಸಿಬ್ಬಂದಿ ನೇಮಕಕ್ಕೆ ಸಮ್ಮತಿ: ಜಿಲ್ಲಾಸ್ಪತ್ರೆಯ ತಜ್ಞ ವೈದರು, ಅರಿವಳಿಕೆ ತಜ್ಞರು, ಸಿಬ್ಬಂದಿ ಕೊರತೆ ಬಗ್ಗೆ ಡಿಎಚ್‌ಒ ಡಾ.ಎಂ.ಜಗದೀಶ್ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಾಗ ಸ್ಪಂದಿಸಿದ ರವಿಕುಮಾರ್, ಕೂಡಲೇ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಒಪ್ಪಿಗೆ ನೀಡಿ ನೇಮಕಾತಿ ಪ್ರಕ್ರಿಯೆ ಮಾಡಿ ಮುಗಿಸಿ ಎಂದು ಸೂಚಿಸಿದರು.
ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾಹಿತಿ ನೀಡಿ, ಮೇ 21ರ ಸಂಜೆ 6ರಿಂದ 25ರ ಬೆಳಗ್ಗೆ 6ರವರೆಗೆ ಕಠಿಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ನಾಲ್ಕೈದು ವಸತಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದು, ತಾಲೂಕು ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಎಸ್ಪಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ನಾಗರಾಜ್, ವಿಭಾಗಾಧಿಕಾರಿ ಸೋಮಶೇಖರ್, ಜಿಲ್ಲಾ ಸರ್ಜನ್ ಡಾ. ಬಿ.ಎಚ್.ರವಿಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಾರಿಣಿ, ತಹಸೀಲ್ದಾರ್ ಶೋಭಿತಾ ಇತರರಿದ್ದರು.
ಮಹತ್ವ ಪಡೆದ ಭೇಟಿ: ಸಾಮಾನ್ಯವಾಗಿ ಮುಖ್ಯ ಕಾರ್ಯದರ್ಶಿಗಳು ಬೆಂಗಳೂರಿನಲ್ಲಿ ಕಾರ್ಯಸ್ಥಾನದಲ್ಲಿದ್ದುಕೊಂಡೇ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡುತ್ತಾರೆ, ಖುದ್ದು ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುವುದು ತೀರಾತಿವಿರಳ. ಲಾಕ್‌ಡೌನ್ ಸಂದರ್ಭದಲ್ಲಿ ರಜಾ ದಿನವಾದ ಭಾನುವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಖುದ್ದು ಕೋಲಾರಕ್ಕೆ ಭೇಟಿ ನೀಡಿ ಕರೊನಾ ನಿಯಂತ್ರಣ ಸಂಬಂಧ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಮಾರ್ಗದರ್ಶನ, ಸಲಹೆ ನೀಡಿದ್ದಾರೆ. ಬೆಂಗಳೂರಿನ ಮಗ್ಗುಲಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಲಾಕ್‌ಡೌನ್ ನಂತರವೂ ಸೋಂಕಿತರ ಸಂಖ್ಯೆಯಲ್ಲಿ ನಿರೀಕ್ಷಿತ ಇಳಿಕೆ ಕಾಣದಿರುವುದರಿಂದ ಮುಖ್ಯಕಾರ್ಯದರ್ಶಿಗಳ ಭೇಟಿ ಹೆಚ್ಚು ಮಹತ್ವ ಪಡೆದಿದೆ.