ಗದಗ: ಕಳೆದ ವರ್ಷ ಕರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ನಿಂದ ತತ್ತರಿಸಿದ್ದ ಹೋಟೆಲ್ ಉದ್ಯಮ ಇತ್ತೀಚೆಗೆ ಕೊಂಚ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕರೊನಾ 2ನೇ ಅಲೆ ಆರ್ಭಟ ಜೋರಾಗಿದ್ದರಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ನಿತ್ಯ ಬೆಳಗ್ಗೆ 6ರಿಂದ ಬೆಳಗ್ಗೆ 10ರವರೆಗೆ ಜನತಾ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ. ನಂತರವೂ ಹೋಟೆಲ್ಗಳು ಪಾರ್ಸೆಲ್ ಕೊಡಬಹುದು. ಆದರೆ, ಮಧ್ಯಾಹ್ನದ ನಂತರ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಯಾರೂ ಪಾರ್ಸೆಲ್ ತೆಗೆದುಕೊಂಡು ಹೋಗಲು ಬರುವುದಿಲ್ಲ. ಇದರಿಂದ ತೀವ್ರ ನಷ್ಟವುಂಟಾಗುತ್ತದೆ. ಜನತಾ ಕರ್ಫ್ಯೂ ಹೇರಿಕೆಯ ಮೊದಲು ಆಗುತ್ತಿದ್ದ ಗಳಿಕೆಯ ಶೇ.20ರಷ್ಟು ವ್ಯಾಪಾರವೂ ಈಗ ಆಗುತ್ತಿಲ್ಲ. ಇದರಿಂದ ಹೋಟೆಲ್ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಬಾಡಿಗೆ ಆಧಾರದಲ್ಲಿ ಕಟ್ಟಡ ಪಡೆದು ಹೋಟೆಲ್ ನಡೆಸುತ್ತಿರುವ ಮಾಲೀಕರು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೋಟೆಲ್ ಕಟ್ಟಡದ ಬಾಡಿಗೆ, ಹಾಲು, ವಿದ್ಯುತ್ ಬಿಲ್, ಗ್ಯಾಸ್, ಕಿರಾಣಿ ಖರ್ಚು ವೆಚ್ಚದ ಜತೆಗೆ ಹೋಟೆಲ್ನಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ಸಂಬಳವನ್ನೂ ಸಹ ನೀಡಬೇಕು. ಇದೆಲ್ಲವನ್ನೂ ಲೆಕ್ಕ ಹಾಕಿದರೆ ಲಾಭ ಆಗುವುದಿರಲಿ, ಹಾಕಿದ ಬಂಡವಾಳವೂ ವಾಪಸ್ ಬರುವ ಗ್ಯಾರಂಟೀಯಿಲ್ಲ ಎನ್ನುತ್ತಾರೆ ಹೋಟೆಲ್ ಮಾಲೀಕರು. ವಿವರಿಸುತ್ತಾರೆ.
ಜನತಾ ಕರ್ಫ್ಯೂ ವಿಧಿಸಿದರೂ ಸೋಂಕಿತರ ಸಂಖ್ಯೆಗೆ ಕಡಿಮೆ ಆಗುತ್ತಿಲ್ಲ. ಕೆಲವೆಡೆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ಕಾರ್ವಿುಕರನ್ನು ಅವರ ತವರು ಗ್ರಾಮಗಳಿಗೆ ಕಳಿಸಲಾಗುತ್ತಿದೆ. ಬಸ್ ಸಂಚಾರ ಇಲ್ಲದ್ದರಿಂದ ಹೋಟೆಲ್ ಮಾಲೀಕರು ಸ್ವಂತ ಖರ್ಚಿನಲ್ಲಿ ಬಾಡಿಗೆ ಕಾರು ಮಾಡಿ ಅವರನ್ನು ಕಳಿಸಿಕೊಡುತ್ತಿದ್ದಾರೆ.
ಗದಗ-ಬೆಟಗೇರಿ ಅವಳಿನಗರದಲ್ಲಿ 30 ನೋಂದಾಯಿತ ಹೋಟೆಲ್ಗಳಿವೆ. 20-30 ನೋಂದಣಿ ಆಗದಿರುವ ಹೋಟೆಲ್ಗಳಿವೆ. ಜಿಲ್ಲೆಯಲ್ಲಿ ಒಟ್ಟು 150ಕ್ಕೂ ಹೆಚ್ಚು ಹೋಟೆಲ್ಗಳದ್ದು, ಸದ್ಯ ಶೇ.70ರಷ್ಟು ಹೋಟೆಲ್ಗಳು ಬಂದ್ ಆಗಿವೆ.