ಧಾರವಾಡ: ಕೋವಿಡ್ ಸೋಂಕು ದೃಢಪಟ್ಟು ಸೋಂಕಿನ ಲಕ್ಷಣವಿಲ್ಲದ ವ್ಯಕ್ತಿಗಳಿಗೆ ಹೋಂ ಐಸೊಲೇಷನ್ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಇಂತಹ ಸೋಂಕಿತರ ಆರೋಗ್ಯದ ಬಗ್ಗೆ ವೈದ್ಯಕೀಯ ತಂಡ ನಿರಂತರವಾಗಿ ಸಂರ್ಪಸಿ ಮಾಹಿತಿ ನೀಡುವ, ಆರೋಗ್ಯ ಸ್ಥಿತಿ ಪರಿಶೀಲಿಸಿ ಸಲಹೆ ನೀಡುವ ಕಾರ್ಯ ಸಮರ್ಪಕವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಪಡೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೋಂ ಐಸೋಲೇಷನ್ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರು ಪಾಲಿಸಬೇಕಾದ ಕ್ರಮಗಳ ಬಗ್ಗೆ ವಿಡಿಯೋ ಸಂದೇಶ ಸಿದ್ಧಪಡಿಸಿ, ತಿಳಿವಳಿಕೆ ನೀಡಬೇಕು ಎಂದರು.
ರೋಗಿಗಳ ಸ್ಥಳಾಂತರಕ್ಕೆ ನಿಗದಿ ಪಡಿಸಿದ ಅಂಬುಲೆನ್ಸ್ಗಳ ಮೂಲಕ ರೋಗಿಗಳ ವಾಸ ಸ್ಥಳಗಳಿಂದ ಆಸ್ಪತ್ರೆಗೆ ಮತ್ತು ಗುಣವಾದವರನ್ನು ಮನೆಗೆ ತಲುಪಿಸುವ ಕಾರ್ಯ ಯೋಜಿತ ರೀತಿಯಲ್ಲಿ ನಿರ್ವಹಿಸಲು ರಚಿಸಿರುವ ತಂಡ ಸದಾ ಸನ್ನದ್ಧವಾಗಿರಬೇಕು. ಪ್ರಯೋಗಾಲಯ ವರದಿ ನೀಡುವ ಕಾರ್ಯವನ್ನು ಕಿಮ್್ಸ ಇನ್ನಷ್ಟು ತ್ವರಿತಗೊಳಿಸಬೇಕು. ಅಗತ್ಯ ಬಿದ್ದರೆ ತಾಲೂಕು ಕೇಂದ್ರಗಳಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ, ಲಕ್ಷಣ ರಹಿತ ರೋಗಿಗಳಿಗೆ ಅಲ್ಲೇ ಚಿಕಿತ್ಸೆ ನೀಡಲಾಗುವುದು. ಆಯಾ ತಹಸೀಲ್ದಾರರು ಸ್ಥಳೀಯವಾಗಿ ಆಸ್ಪತ್ರೆ, ವಸತಿ ಶಾಲೆಗಳಲ್ಲಿ, ಹಾಸಿಗೆಗಳು, ಆಹಾರ ಪೂರೈಕೆ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ತಾಲೂಕು ಮಟ್ಟದಿಂದ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸುವ ಕಾರ್ಯದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರೂ ಭಾಗಿಯಾಗಲಿದ್ದಾರೆ. ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ವಸತಿ ಶಾಲೆ, ವೈದ್ಯಕೀಯ, ಅರೆ ವೈದ್ಯಕೀಯ ಮಾನವ ಸಂಪನ್ಮೂಲದ ಸಮರ್ಥ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಪಾಲಿಕೆ ಉಪ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಡಾ. ಲಕ್ಷ್ಮೀಕಾಂತ ಲೋಕರೆ, ಡಾ.ಸುಜಾತಾ ಹಸವಿಮಠ, ಡಾ.ಶಶಿ ಪಾಟೀಲ, ಡಾ. ಶಶಿಕಲಾ ನಿಂಬಣ್ಣವರ, ಡಾ. ತನುಜಾ, ಇತರರು ಇದ್ದರು.