ಗೌರಿಬಿದನೂರು: ಹೊಸೂರಿನಲ್ಲಿ ಸ್ಥಾಪಿಸಿರುವ ಕಸ ಸಂಸ್ಕರಣಾ ಘಟಕ ದೇಶಕ್ಕೆ ಮಾದರಿಯಾಗಿರುವ ಘಟಕವಾಗಿದೆ ಎಂದು ಜಿಪಂ ಸದಸ್ಯ ಎಚ್.ವಿ.ಮಂಜುನಾಥ್ ಹೇಳಿದರು.
ಮುದುಗೆರೆ ಹಾಗೂ ಸೊನಗಾನಹಳ್ಳಿಯ ಗ್ರಾಪಂಗಳಿಗೆ ಕಸ ಸಾಗಿಸುವ ವಾಹನಗಳಿಗೆ ಚಾಲನೆ ಹಾಗೂ ಕಸದ ಡಬ್ಬಿಗಳನ್ನು ವಿತರಿಸಿ ಮಾತನಾಡಿದರು. ಘಟಕದಿಂದ ಹಸಿ ಹಾಗೂ ಒಣ ತ್ಯಾಜ್ಯಗಳನ್ನು ಸಂಪೂರ್ಣವಾಗಿ ವಿಂಗಡಿಸಿ ಶೇ. 100 ರಷ್ಟು ಪುನರ್ ಬಳಕೆ ಮಾಡಬಹುದಾಗಿದೆ. ಇದರಿಂದ ಪರಿಸರದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. ಅಲ್ಲದೆ ಪ್ಲಾಸ್ಟಿಕ್, ಗಾಜಿನ ಸೀಸ, ರಬ್ಬರ್ ಇನ್ನಿತರೇ ಪದಾರ್ಥಗಳನ್ನು ಪುನರ್ ಬಳಕೆಗೆ ಹಾಗೂ ಹಸಿ ಕಸವನ್ನು ಸಾವಯವ ರಸಗೊಬ್ಬರ ತಯಾರಿಸಿ ರೈತರಿಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಸ್ಥಳೀಯ ಪಂಚಾಯಿತಿಗಳಿಗೂ ಆರ್ಥಿಕ ಲಾಭವಾಗಲಿದೆ. ಆದರಿಂದ ಸ್ಥಳೀಯರು ಕಸವನ್ನು ಬಿಸಾಡದೆ ಮನೆ ಬಾಗಿಲಿಗೆ ಬರುವ ಪಂಚಾಯಿತಿ ವಾಹನಗಳಿಗೆ ನೀಡಬೇಕು ಎಂದರು
ತಾಪಂ ಅಧ್ಯಕ್ಷ ಎಸ್. ಎಲ್. ಲೋಕೇಶ್ ಮಾತನಾಡಿ, ಈ ವಿನೂತನ ಯೋಜನೆಯನ್ನು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನ ಮಾಡುತ್ತಿರುವುದು ಹೆಮ್ಮೆಯ ವಿಷಯ, ಈ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅತಿಮುಖ್ಯ ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಳಪ್ಪ ಮಾತನಾಡಿ, ನಾಗರಿಕರು ಪ್ರತಿದಿನ ಮನೆಯ ಬಾಗಿಲಿಗೆ ಬರುವ ಪಂಚಾಯಿತಿ ವಾಹನಕ್ಕೆ ಕಸ ನೀಡಬೇಕೆಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿಯಿಂದ ಎಲ್ಲರಿಗೂ ಕಸದ ಡಬ್ಬಿಗಳನ್ನು ಉಚಿತವಾಗಿ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ನಾಗಪ್ಪ, ಉಪಾಧ್ಯಕ್ಷೆ ಲಕ್ಷ್ಮೀದೇವಮ್ಮ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.