ಚನ್ನರಾಯಪಟ್ಟ: ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀ ವೀರಾಂಜನೇಯಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವವು ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಈ ಹಿನ್ನೆಲೆಯಲ್ಲಿ ಮುಂಜಾನೆಯೇ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಉತ್ಸವ ಸಾಗುವ ಪ್ರಮುಖ ಬೀದಿಯನ್ನು ಸ್ವಚ್ಛಗೊಳಿಸಿ, ನೀರು ಹಾಕಿ, ರಂಗೋಲಿ ಬಿಡಿಸಲಾಗಿತ್ತು.
ಭಕ್ತರು ಹಣ್ಣು-ಕಾಯಿ ಅರ್ಪಿಸಿ ದೇವರ ದರ್ಶನ ಪಡೆದರು. ಮಧ್ಯಾಹ್ನ ಶ್ರೀ ವೀರಾಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ಒಡವೆ-ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಲಾಯಿತು. ಸಂಜೆ 7.30 ರಲ್ಲಿ ತೆರೆದ ವಾಹನದ ಮೇಲೆ ಮುತ್ತಿನ ಪಲ್ಲಕ್ಕಿಯ ಮೇಲೆ ಶ್ರೀ ವೀರಾಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮಂಗಳವಾದ್ಯದೊಂದಿಗೆ ಉತ್ಸವವು ಪ್ರಮುಖ ಬೀದಿಗಳಲ್ಲಿ ಸಾಗಿತು. ತಾಯಂದಿರು ಸೋಬಾನೆ ಪದ ಹಾಡಿದರೆ ಹೆಣ್ಣು ಮಕ್ಕಳು ಆರತಿ ಹಿಡಿದು ಸಾಗಿದರು. ಉತ್ಸವದಲ್ಲಿ ವೀರಗಾಸೆ ಕುಣಿತ ನೋಡುಗರ ಗಮನ ಸೆಳೆಯಿತು.
ಪಟೇಲ್ ವಂಶಸ್ಥರಾದ ಸತೀಶ್ ಹಾಗೂ ಶ್ರೀನಿವಾಸ್ ಅನ್ನದಾಸೋಹ ಕಾರ್ಯಕ್ರಮ ನಡೆಸಿಕೊಟ್ಟರು. ಕೆಪಿಸಿಸಿ ಸದಸ್ಯೆ ರಾಜೇಶ್ವರಿ ವಿಜಯಕುಮಾರ್, ದಿಡಗ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ್, ಮಾಜಿ ಸದಸ್ಯರಾದ ಈರೇಗೌಡ(ದೊರೆಯಣ್ಣ), ರವಿಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.