ಜಿಲ್ಲೆ

ಹೊಸಹಳ್ಳಿಮೋಳೆಯಲ್ಲಿ ಕಂಡಾಯ ಉತ್ಸವ

ಮೂಗೂರು: ಹೊಸಹಳ್ಳಿ ಮೋಳೆ ಗ್ರಾಮದಲ್ಲಿ ಬುಧವಾರ ರಾತ್ರಿ ಮದ್ದೂರಿನ ಹೊನ್ನಾಯಕನಹಳ್ಳಿ ಶ್ರೀಮಂಟೇಸ್ವಾಮಿ ಮಠದ ಬಸವನ ಸಮೇತ ಕುರುಬನಕಟ್ಟೆ ಕಂಡಾಯ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದಲ್ಲಿ 48 ದಿನಗಳ ಹಿಂದೆ ಶ್ರೀಸಿದ್ದಪ್ಪಾಜಿ ನೂತನ ದೇಗುಲವನ್ನು ಬೊಪ್ಪೇಗೌಡನಪುರದ ಸಂಸ್ಥಾನ ಮಠದ ಶ್ರೀಜ್ಞಾನಾನಂದ ಚೆನ್ನರಾಜೇ ಅರಸ್ ಸ್ವಾಮೀಜಿ ಉದ್ಘಾಟಿಸಿದ್ದರು.

ಆ ಹಿನ್ನೆಲೆಯಲ್ಲಿ ಮದ್ದೂರು ತಾಲೂಕಿನ ಹೊನ್ನಾಯಕನಹಳ್ಳಿ ಶ್ರೀಮಂಟೇಸ್ವಾಮಿ ಮಠದ ಬಸವನನ್ನು ಬರಮಾಡಿಕೊಂಡು ಗ್ರಾಮದಲ್ಲಿನ ದೇಗುಲದ ಪೂಜೆ ಹಾಗೂ ಧಾರ್ಮಿಕ ಕಾರ್ಯನಿರ್ವಹಿಸಲು ಅರ್ಚಕರನ್ನು ಮಠದ ಬಸವ ಸೂಚಿಸಿದ ನಂತರ ಕುರುಬನ ಕಟ್ಟೆ ಕಂಡಾಯದ ಸಮೇತ ಶ್ರೀಸಿದ್ದಪ್ಪಾಜಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಲಾಯಿತು.

ಇದಕ್ಕೂ ಮೊದಲು ಗ್ರಾಮದ ಮುಖಂಡರು ಮಂಟೇಸ್ವಾಮಿಯ ನೀಲಗಾರರು ಹಾಗೂ ಭಕ್ತರು ಗ್ರಾಮದ ಹನುಮ ದೇಗುಲದ ಬಳಿ ಜಮಾಯಿಸಿ ಮಠದ ಬಸವನಿಗೆ ದಾರಿಯುದ್ದಕ್ಕೂ ಹೂ ಚೆಲ್ಲಿ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು.

ಮಂಡಲ ಪೂಜೆ ಹಿನ್ನೆಲೆಯಲ್ಲಿ ಗ್ರಾಮವನ್ನು ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಬುಧವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೇರವೇರಿಸಲಾಯಿತು. ಗ್ರಾಮದ ಯಜಮಾನರು, ಮುಖಂಡರು, ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.