ನಂಜನಗೂಡು: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ನಿವೇಶನ ಹಾಗೂ ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದ ತಾಲೂಕು ಆಡಳಿತಸೌಧದ ಎದುರು ಸೋಮವಾರ ಹೊಸಹಳ್ಳಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು.
ಈ ಹಿಂದೆ ಗ್ರಾಮದಲ್ಲಿ ಪೂರ್ವಜರು ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಕಿಟ್ಟಯ್ಯನ ಹುಂಡಿಯಲ್ಲಿ ವಾಸ ಮಾಡುತ್ತಿದ್ದರು. ಕಾಲಕ್ರಮೇಣ ದಬ್ಬಾಳಿಕೆ ದೌರ್ಜನ್ಯದಿಂದ, ನಲುಗಿ ಹೋಗಿ 3.30 ಎಕರೆ ಜಾಗವನ್ನು ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಮರಳಿ ನಮ್ಮ ಗ್ರಾಮಕ್ಕೆ ಬಿಡಿಸಿ ಕೊಡಬೇಕು. ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಉಪ್ಪಾರ, ಗೆಜ್ಜಗಾರ ಹಾಗೂ ಕುಂಬಾರ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಬಡ ಜನರಿಗೆ ಈ ಸ್ಥಳದಲ್ಲಿ ನಿವೇಶನ ಹಂಚಿಕೊಡಬೇಕು. 30 ವರ್ಷಗಳ ಹಿಂದೆ ಹೊಸಹಳ್ಳಿ ಗ್ರಾಮದಿಂದ ಶಂಕರಪುರ ಮೂಲಕ ನಂಜನಗೂಡು ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆಯನ್ನು ನಂಜನಗೂಡಿನ ಉದ್ಯಮಿ ಒಬ್ಬರು ಮುಳ್ಳು ತಂತಿಯನ್ನು ಹಾಕಿಕೊಂಡು ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಕೆಲವೇ ಸಮಯಗಳಲ್ಲಿ ಪಟ್ಟಣಕ್ಕೆ ತಲುಪಬಹುದಿತ್ತು. ಈಗ ಸುತ್ತಿ ಬಳಸಿ ಪಟ್ಟಣಕ್ಕೆ ತಲುಪಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಒತ್ತುವರಿ ತೆರವುಗೊಳಿಸಿ ರಸ್ತೆ ಬಿಡಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಶಿರಸ್ತೇದಾರ್ ರಾಜು ಅವರ ಮೂಲಕ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ಕಾಂಗ್ರೆಸ್ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎಚ್.ಆರ್.ಲೋಕೇಶ್, ಬಿಎಸ್ಪಿ ಅಧ್ಯಕ್ಷ ಎಚ್.ಆರ್.ಪುರುಷನಾಥ್, ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಚೆಲುವಸ್ವಾಮಿ, ಗುರು ಸಿದ್ದಯ್ಯ, ನಂಜುಂಡಸ್ವಾಮಿ, ಜಯರಾಮ್, ಮಹೇಶ್, ರಮೇಶ್, ಸಣ್ಣ ತಾಯಮ್ಮ, ಜಯಲಕ್ಷ್ಮೀ, ಪುಟ್ಟ ಮಾದಮ್ಮ ಹಾಜರಿದ್ದರು.