ಮೈಸೂರು: ವಿರಕ್ತ ಪರಂಪರೆಯಲ್ಲಿ ಐದು ಶತಮಾನಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಹೊಸಮಠದಲ್ಲಿ ಗುರುವಾರ ಅಮೃತಘಳಿಗೆಯ ಸಡಗರ ಮೇಳೈಸಿತ್ತು.
ಶ್ರೀ ಹೊಸಮಠ ಮತ್ತು ಶ್ರೀ ನಟರಾಜ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಶ್ರೀ ನಟರಾಜ ಕಾಲೇಜಿನ ಮುಂಭಾಗದಲ್ಲಿ ಗುರುವಾರ ಆಯೋಜಿಸಿದ್ದ ನಿರಂಜನ ಪಟ್ಟಾಧಿಕಾರ ಮಹೋತ್ಸವ, ಶ್ರೀ ಚಿದಾನಂದ ಸ್ವಾಮೀಜಿ ಅವರ ಅಮೃತ ಮಹೋತ್ಸವದ ಗುರುವಂದನೆ ಸಮಾರಂಭದಲ್ಲಿ ಹಬ್ಬ ವಾತಾವರಣ ನಿರ್ಮಾಣವಾಗಿತ್ತು.
ವಿವಿಧ ಭಾಗಗಳಿಂದ ಬಂದಿದ್ದ ಹರಗುರು ಚರಮೂರ್ತಿಗಳು 75ನೇ ವಸಂತ ಪೂರೈಸಿರುವ ಪ್ರಾತಃಸ್ಮರಣೀಯರಾದ ಚಿದಾನಂದಶ್ರೀಗಳಿಗೆ ಗುರುವಂದನೆ ಅರ್ಪಿಸಿದರು. ಗುರುಪರಂಪರೆಯ ಶ್ರೀಮಠದ ನೂತನ ಉತ್ತರಾಧಿಕಾರಿಗೂ ಅಭಿನಂದಿಸಿದರು. ಭಕ್ತ ಸಮುದಾಯವು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿತು.
ಶ್ರಿಮಠದ ಪಟ್ಟಾಧಿಕಾರ ಹಸ್ತಾಂತರ: ತಿ.ನರಸೀಪುರ ತಾಲೂಕಿನ ಮುಡುಕನಪುರ ಗ್ರಾಮದ ಶರಣ ದಂಪತಿ ಸೌಮ್ಯ-ಬಸವಲಿಂಗಪ್ಪ ಅವರ ಪುತ್ರ ಎಂ.ಬಿ.ರಾಕೇಶ್ ಎಂಬ ವಟುವಿಗೆ ಶಿವದೀಕ್ಷಾ ಸಂಸ್ಕಾರವನ್ನು ನೀಡಲಾಯಿತು. ಬೆಳಗ್ಗೆ 4.30ರಿಂದ 5.30ರ ಒಳಗೆ ಸಲ್ಲುವ ಶುಭ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಚಿದಾನಂದ ಸ್ವಾಮೀಜಿ ಅವರು ಪಟ್ಟಾಧಿಕಾರ ನೀಡಿ ಶ್ರೀಮಠದವನ್ನು ಮುನ್ನಡೆಸಿಕೊಂಡು ಹೋಗಲು ಆಶೀರ್ವದಿಸಿದರು. ಇದರೊಂದಿಗೆ ಹೊಸಮಠದ 22ನೇ ಸ್ವಾಮೀಜಿಯಾಗಿ ಪಟ್ಟಾಧಿಕಾರ ವಹಿಸಿಕೊಂಡರು. ಇವರಿಗೆ ‘ಶ್ರೀ ಸಿದ್ಧಬಸವ ಸ್ವಾಮೀಜಿ’ ಎಂದು ಮರುನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಹೊಸಮಠದ ನೂತನ ಲಾಂಛನ, ಚಿದಾನಂದ ಶ್ರೀಗಳ ಅಮೃತ ಮಹೋತ್ಸವ ಗುರುವಂದನಾ ಗ್ರಂಥವಾದ ‘ಚಿದ್ಬೆಳಕು’, ಚಿದಾಮೃತ ಚಿತ್ರಸಂಪುಟ, ವಾತ್ಸಲ್ಯ ತ್ರೈಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭವನ್ನು ಉದ್ಘಾಟನೆ ಮಾಡಿದ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಸಮಾಜಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ. ಶಿಕ್ಷಣ, ವಸತಿ, ಆರೋಗ್ಯ ಹೀಗೆ ವಿವಿಧ ದಾಸೋಹ ಮಾಡುವ ಮೂಲಕ ರಾಜ್ಯದ ಪ್ರಗತಿಗೆ ನೆರವಾಗಿವೆ. ಈ ಸಾಲಿನಲ್ಲಿ ನಗರದ ಹೊಸಮಠವೂ ಸೇರಿದೆ. ಇದು ಎಲ್ಲ ವರ್ಗದವರಿಗೂ ಶಿಕ್ಷಣ ಕೊಡುತ್ತಿದೆ. 16 ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಂದಾಜು 6 ಸಾವಿರ ಜನರಿಗೆ ಅಕ್ಷರ ದಾಸೋಹ ಉಣಬಡಿಸುತ್ತಿದೆ ಎಂದರು.
ಹೊಸಮಠದ ಚಿದಾನಂದಶ್ರೀಗಳು ನೇರ ನುಡಿಯವರು, ಸತ್ಯದ ಪ್ರತಿಪಾದಕರು. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ಆದರೆ, ಈಗಿನ ಕಾಲದಲ್ಲಿ ಸತ್ಯ ಕಹಿ. ನಿಜ ಕೆಟ್ಟದಾಗಿದೆ. ಶ್ರೀಗಳು ಕೊಂಚ ಕೋಪ ಕಡಿಮೆ ಮಾಡಿಕೊಳ್ಳಬೇಕು. ನಿಮ್ಮ ಶಿಷ್ಯನಾಗಿ ಈ ಮಾತು ಹೇಳುತ್ತಿರುವೆ ಎಂದು ಹೇಳಿದರು.
ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಐನೂರು ವರ್ಷಗಳ ಇತಿಹಾಸವಿರುವ ಮಠವಾಗಿದ್ದರೂ ನಿತ್ಯ ನೂತನವಾಗಿ ಹೊಸಮಠ ಉಳಿದುಕೊಂಡಿದೆ. ಇದರ ಪರಂಪರೆಯಲ್ಲಿ ಶ್ರೀ ಸಂಗನ ಬಸವಲಿಂಗ ಸ್ವಾಮೀಜಿ ಅವರಿಂದ ಪ್ರಾರಂಭವಾಗಿ 21ನೇ ಗುರುಗಳಾದ ಶ್ರೀ ಚಿದಾನಂದ ಸ್ವಾಮೀಜಿವರೆಗೆ ಮಠದ ಸೇವೆಗೆ ತೇಯ್ದ ಗಂಧದಂತೆ, ಉರಿಯುವ ದೀಪದಂತೆ ಅರ್ಪಿಸಿಕೊಂಡು ಮಠವನ್ನು ಬೆಳೆಸಿದ್ದಾರೆ ಎಂದರು.
1982ರ ಬಳಿಕ ಚಿದಾನಂದಶ್ರೀಗಳು ಈ ಮಠಕ್ಕೆ ವಿಶೇಷ ಬೆಳಕನ್ನು ನೀಡಿದರು. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ, ಅನ್ನ ದಾಸೋಹ, ಸರಳ ವಿವಾಹ, ಸಾಮಾಜಿಕ ಸೇವೆ ಮಾಡಿಕೊಂಡು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಎಂದಿಗೂ ಭಾಷಣ ಮಾಡಿದವರಲ್ಲ. ಏಕೆಂದರೆ ಕಾಯಕ ಮಾಡಬೇಕು ಎಂಬುದೇ ಅವರ ಧ್ಯೇಯ. ಹೀಗಾಗಿ ಕೆಲಸ ಮಾಡಬೇಕು, ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕೆಂಬ ಭಾವನೆ ಹೆಚ್ಚಿನದು ಎಂದು ಹೇಳಿದರು.
ನಾಡಿನ ಮಠಮಾನ್ಯಗಳು ಸಾಮಾಜಿಕ, ಧಾರ್ಮಿಕ ಸೇವೆ ಸಲ್ಲಿಸುತ್ತಿವೆ. ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಹಸನಗೊಳಿಸಿದ ಸಾಧನೆಯಲ್ಲಿ ಮಠಗಳ ಕೊಡುಗೆ ದೊಡ್ಡದು. ಇದರಲ್ಲಿ ಹೊಸಮಠದ ಪಾಲುದಾರಿಕೆಯನ್ನು ಸ್ಮರಿಸಬೇಕು ಎಂದರು.
ಹೊಸಮಠದ ಪರಂಪರೆ ಮುಂದುವರಿಯಬೇಕು ಎಂದು ಶ್ರೀ ಚಿದಾನಂದ ಸ್ವಾಮೀಜಿ ಅವರು ಶ್ರೀ ಸಿದ್ಧಬಸವ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯನ್ನು ನೇಮಿಸಿ ಸಮಾಜದ ಮಡಲಿಗೆ ಹಾಕಿದ್ದಾರೆ. ಮಠಗಳಿಗೆ ಸ್ವಾಮೀಜಿ ದೀಕ್ಷೆ ಕೊಡಿಸಲು ಮಕ್ಕಳನ್ನು ಕೇಳಿದರೆ ಹಿಂದೇಟು ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ ಇವರ ಪಾಲಕರನ್ನು ಸ್ಮರಿಸಬೇಕು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಿಕ್ಷಣ ನೀಡುವ ಮೂಲಕ ರಾಜ್ಯದಲ್ಲಿ ಅನಕ್ಷರಸ್ಥರ ಸಂಖ್ಯೆ ತಗ್ಗಿಸಿದ ಸಾಧನೆಯ ಹಿರಿಮೆ ವೀರಶೈವ ಲಿಂಗಾಯತ ಮಠಗಳಿಗೆ ಸಲ್ಲಬೇಕು. ಮಠಮಾನ್ಯಗಳು ಕೆಲಸ ಮಾಡಿರುವುದು ಅಪಾರವಾಗಿದೆ. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದೆ. ಆದರೆ, ಮಠಮಾನ್ಯಗಳ ಕೊಡುಗೆಯಿಂದ ರಾಜ್ಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ ಎಂದರು.
ರಾಜ್ಯದಲ್ಲಿ ಸಾವಿರಾರು ಮಠಗಳು ಸೇವೆ ಸಲ್ಲಿಸಿವೆ. ಸ್ವಾಮೀಜಿಗಳಿಗೆ ಪ್ರಸಾದಕ್ಕೆ ಸೌಲಭ್ಯ ಇಲ್ಲದಿದ್ದರೂ ಮಠದ ವಿದ್ಯಾರ್ಥಿಗಳ ಬೆಳವಣಿಗೆ ಮುಖ್ಯ ಎಂದು ಕಂಕಣ ಕಟ್ಟಿ ನಾಡಿನ ಮಕ್ಕಳ ಕಲ್ಯಾಣಕ್ಕೆ ಲಿಂಗಾಯತ ಮಠಗಳ ಶ್ರಮಿಸಿವೆ. ಅಂತಹ ಮಠಗಳಲ್ಲಿ ಶ್ರೀ ಹೊಸಮಠವೂ ಒಂದು. ಹೊಸಮಠವನ್ನು ನವೀಕರಿಸಿದ ಕೀರ್ತಿ ಶ್ರೀ ಗುರುಶಾಂತ ಸ್ವಾಮೀಜಿಗಳಿಗೆ ಸಲ್ಲಬೇಕು ಎಂದರು.
6 ಶತಮಾನಗಳ ಹಿಂದೆ ಮಠ ಆರಂಭವಾದರೂ ನವೀಕರಣದ ನಂತರ ಹೊಸಮಠ ಎಂದು ಹೆಸರುವಾಸಿಯಾಗಿದೆ. ನಗರದಲ್ಲಿ ಅನೇಕ ಮಠಗಳು ಸ್ಥಾಪನೆಯಾಗಿದ್ದವು. ಆದರೆ, ಇದೀಗ ಬೆರಳಣಿಯಷ್ಟು ಮಠ ಮಾತ್ರ ಉಳಿದುಕೊಂಡಿವೆ. ಶ್ರೀ ಚಿದಾನಂದ ಸ್ವಾಮೀಜಿ ಅವರು ವೈಯಕ್ತಿಕ ಸಮಾರಂಭಗಳಿಗೆ ಅವಕಾಶ ಕೊಟ್ಟವರಲ್ಲ.
ಎಂದಿಗೂ ಮಾತನಾಡುವವರಲ್ಲ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಭಾವೇದಿಕೆ ಮುಂಭಾಗ ಕೂರುವುದಿಲ್ಲ. ಹಿಂಬದಿಯಲ್ಲಿ ಕೂತು ತೆರಳುತ್ತಾರೆ. ಸರಿಯಾದ ಸಮಯಕ್ಕೆ ಪೂಜೆ-ಪುನಸ್ಕಾರಗಳನ್ನು ಮಾಡುವ ದೃಷ್ಟಿಯಿಂದ ಅವರು ಹೀಗೆ ಮಾಡುತ್ತಾರೆ. ಎಲ್ಲವನ್ನು ಕುತೂಹಲದಿಂದ ವೀಕ್ಷಿಸುವ, ಆಲಿಸುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಶ್ರೀ ರಾಜೇಂದ್ರ ಸ್ವಾಮೀಜಿ ಅವರಿಗೆ ನಿಕಟ ಸಂಬಂಧ ಹೊಂದಿದ್ದರು ಎಂದರು.
ಹೊಸಮಠದ ವಿದ್ಯಾಸಂಸ್ಥೆಯನ್ನು ವಿಸ್ತರಿಸಿ ಸಾವಿರಾರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಿಂದ ಬರುವ ಹೆಣ್ಣು ಮಕ್ಕಳಿಗೆ ವಸತಿ ನಿಲಯದ ಸೌಲಭ್ಯ ಕಲ್ಪಿಸಿರುವುದು ಮಾದರಿ ಕೆಲಸ. ಸಮಾಜಕ್ಕೆ ತೊಂದರೆಯಾಗುವ ಸಂದರ್ಭದಲ್ಲಿ ಸಮುದಾಯವನ್ನು ಸಂಘಟಿಸಿ ಕೂಡಲೇ ಪ್ರತಿಕ್ರಿಯಿಸಿ ಜನರನ್ನು ಎಚ್ಚರಿಸುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಮಠದ ಪರಂಪರೆ ಮುಂದುವರಿಯಬೇಕು ಎಂಬ ಸದಾಶಯದಿಂದ ಶ್ರೀ ಸಿದ್ಧಬಸವ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ. ನೂತನ ಶ್ರೀಗಳು ಈಗ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮುಗ್ಧರಾಗಿದ್ದಾರೆ. ಆದರೆ, ಅವರು ಆಡಿದ ಎರಡು ಮಾತುಗಳು ಮಠದ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಕ್ಷಿಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಲಗಕೋಟೆಯ ಇಳಕಲಿನ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಕಲಿತವರು ದೊಡ್ಡ ವ್ಯಕ್ತಿಯಾದ ಬಳಿಕ ಮಠಕ್ಕೆ ಬರಲ್ಲ. ಐಷಾರಾಮಿ ಜೀವನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡುವ ಅವರು ಮಠಕ್ಕೆ ನೆರವು ಆಗಲ್ಲ. ಬಡಮಕ್ಕಳನ್ನು ದತ್ತು ಸ್ವೀಕರಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಲಿಂಗಾಯತ ಸಮುದಾಯದವರು ಜ್ಯೋತಿಷಿಗಳ ಮಾತು ಕೇಳಿ ಏನೇನೋ ಮಾಡುತ್ತಾರೆ. ಆದರೆ ಜಂಗಮ ದೇವರಾಗಿರುವ ಮಠದ ಸ್ವಾಮೀಜಿ ಅವರ ಒಂದು ಮಾತು ಕೇಳಲ್ಲ ಎಂದರು.
ವಾಟಾಳ ಸೂರ್ಯಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ದೇವನೂರಿನ ಶ್ರೀ ಮಹಾಂತ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಎಂ.ಗಣೇಶ್‌ಪ್ರಸಾದ್, ಟಿ.ಎಸ್.ಶ್ರೀವತ್ಸ, ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಇತರರಿದ್ದರು.