ಹೊಸನಗರ: ಪಟ್ಟಣದ ಮಾವಿನಕೊಪ್ಪದಲ್ಲಿರುವ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಲಾಕರ್‌ನಲ್ಲಿದ್ದ ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಕಳ್ಳರ ಕೈಗೆ ಸಿಗದೆ ಸೇಫ್ ಆಗಿದ್ದು, ಕಾಲೇಜು ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ.
ಗುರುವಾರ ರಾತ್ರಿ ಕಾಲೇಜಿನ ಗೇಟ್, ಆಫೀಸ್ ಛೇಂಬರ್, ವಿಜ್ಞಾನ ವಿಭಾಗ ಕಚೇರಿ ಸೇರಿದಂತೆ ಮೂರು ಕಡೆ ಬೀಗ ಮುರಿಯಲಾಗಿದೆ. ಅಲ್ಲದೇ ಒಳಗಿದ್ದ ಬೀರುಗಳನ್ನು ತೆರೆದು ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಅಲ್ಲೇ ಪಕ್ಕದಲ್ಲಿದ್ದ ಪ್ರಶ್ನೆಪತ್ರಿಕೆ ಇಟ್ಟಿದ್ದ ಕೊಠಡಿಯ ಸೀಲು ಹಾಕಿದ ಹೊರಗಿನ ಬೀಗವನ್ನು ಮುರಿದಿದ್ದಾರೆ. ಆದರೆ, ಇಂಟರ್‌ಲಾಕ್ ಇದ್ದ ಕಾರಣ ಬಾಗಿಲು ತೆರಯಲು ಸಾಧ್ಯವಾಗಿಲ್ಲ. ಆಫೀಸ್ ಛೇಂಬರ್, ವಿಜ್ಞಾನ ವಿಭಾಗದಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳನ್ನು ಮುಟ್ಟದೆ ಬೀರುವಿನಲ್ಲಿ ಅಂದಾಜು 20 ಸಾವಿರ ರೂ. ನಗದನ್ನು ದೋಚಲಾಗಿದೆ.
ಪರೀಕ್ಷೆ ಇತ್ತು: ಶುಕ್ರವಾರ ಬಿಎ ಅಂತಿಮ ವಿಭಾಗದ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಿಜಿನೆಸ್ ಮ್ಯಾನೇಜ್‌ಮೆಂಟ್ ಪರೀಕ್ಷೆ ಇತ್ತು. ಆದರೆ ಕಳ್ಳತನದ ಪ್ರಕರಣ ಬೆಳಗ್ಗೆ ಬೆಳಕಿಗೆ ಬರುತ್ತಿದ್ದಂತೆ ಆತಂಕ ಎದುರಾಗಿತ್ತು. ಪರಿಶೀಲನೆ ಮಾಡಿದಾಗ ಪ್ರಶ್ನೆಪತ್ರಿಕೆ ಸೇಫ್ ಆದ ಕಾರಣ ಪರೀಕ್ಷೆ ಸುಗಮವಾಗಿ ನಡೆಯಿತು. ಕಾಲೇಜಿನಲ್ಲಿ ಬೀಗ ಮುರಿದಿದ್ದು, ಒಳಗಡೆ ಫೈಲ್‌ಗಳು ಚೆಲ್ಲಾಪಿಲ್ಲಿಯಾಗಿವೆ. ಆದರೆ ಪ್ರಶ್ನೆ ಪತ್ರಿಕೆ ಸುರಕ್ಷಿತವಾಗಿದೆ. ಹಣಕ್ಕಾಗಿ ಹುಡುಕಾಟ ನಡೆಸಿರಬಹುದು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಪ್ರಾಚಾರ್ಯ ಪ್ರಭಾಕರ್ ರಾವ್ ತಿಳಿಸಿದರು.
ಸಿಸಿಟಿವಿಯಲ್ಲಿ ಸೆರೆ: ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಲು ಇಬ್ಬರು ಒಳಹೊಕ್ಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹೊಸನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು ಕರೆಂಟ್ ಇಲ್ಲದ ಕಾರಣ ಭದ್ರತಾ ಸಿಬ್ಬಂದಿ ಮನೆಗೆ ತೆರಳಿದ್ದಾನೆ. ಇದರ ಸದುಪಯೋಗ ಪಡೆದು ಕಳ್ಳರು ಕೃತ್ಯ ಎಸಗಿದ್ದಾರೆ.