ಅದೇ ರಾಗ, ಅದೇ ಹಾಡು...!
ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅಕ್ಷರಶಃ ಅನ್ವಯವಾಗುವ ಮಾತು ಇದು. ಪ್ರತಿವರ್ಷದಂತೆ ಹೊಸತನವಿಲ್ಲದೆ 2025ನೇ ಸಾಲಿನ ದಸರಾ ಸಂಪನ್ನಗೊಂಡಿದೆ.
ಕಳಪೆ ಕಾರ್ಯಕ್ರಮಗಳು, ಅಸಮರ್ಪಕ ನಿರ್ವಹಣೆ, ದುಂದುವೆಚ್ಚ ಈ ಸಲವೂ ವಿಜೃಂಭಿಸಿವೆ. ಹಳೇ ಸಿಡಿಯನ್ನು ಮತ್ತೊಮ್ಮೆ ಹಾಕಿ ಜನಸಮೂಹವನ್ನು ರಂಜಿಸುವ ಪ್ರಯತ್ನ ಮಾಡಲಾಯಿತು. ಹಿಂದಿನ ಕಾರ್ಯಕ್ರಮಗಳನ್ನೇ ‘ಕಟ್ ಆ್ಯಂಡ್ ಪೇಸ್ಟ್’ ಮಾಡಿ ಕೈತೊಳೆದುಕೊಳ್ಳಲಾಯಿತು.
ದಸರಾ ಉದ್ಘಾಟನೆ, ಜಂಬೂಸವಾರಿ ಮೆರವಣಿಗೆ ಮಾತ್ರ ಸಾಂಪ್ರದಾಯಿಕ ಆಚರಣೆ. ಉಳಿದವುಗಳು ನಾಡಹಬ್ಬಕ್ಕೆ ಸೇರ್ಪಡೆಗೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು. ಇವುಗಳಿಗೆ ನವೀನತೆಯ ಸ್ಪರ್ಶ ಕೊಡಲಿಲ್ಲ. ಪ್ರತಿ ವರ್ಷದಂತೆ ನಡೆಯುವ ಸಪ್ಪೆ ಕಾರ್ಯಕ್ರಮಗಳಾಗಿ ಪುನರಾವರ್ತನೆಗೊಂಡವು.
ಕೊನೆ ಘಳಿಗೆಯಲ್ಲಿ ತಯಾರಿ: ಈ ಸಲವೂ ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ತಪ್ಪಲಿಲ್ಲ. ಕೊನೆ ಘಳಿಗೆಯಲ್ಲೇ ಎಲ್ಲ ಸಿದ್ಧತೆಗಳನ್ನು ತರಾತುರಿಯಲ್ಲಿ ಮಾಡುವ ಮೂಲಕ ಗುಣಮಟ್ಟ ಕಾಯ್ದುಕೊಳ್ಳಲಿಲ್ಲ. ದಸರಾ ಶುರುವಾದ ಬಳಿಕವೇ ಗುಂಡಿಮುಚ್ಚುವ ಕಾರ್ಯ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಂಡಿದ್ದು ಕಣ್ಣಿಗೆ ರಾಚಿತು.
ದಸರಾಕ್ಕೆ ಈ ಸಲ ಪ್ರಚಾರದ ಕೊರತೆ ತೀವ್ರವಾಗಿ ಕಾಡಿತು. ಎರಡ್ಮೂರು ತಿಂಗಳ ಮುನ್ನವೇ ಪ್ರಚಾರ ಮಾಡಿ ದೇಶ-ವಿದೇಶದ ಪ್ರವಾಸಿಗರನ್ನು ಈ ಬಾರಿಯೂ ಆಕರ್ಷಿಸಲಿಲ್ಲ. ರೈಲು, ವಿಮಾನ ನಿಲ್ದಾಣದಲ್ಲಿ ಪ್ರಚಾರವನ್ನೂ ಕೈಗೊಳ್ಳಲಿಲ್ಲ. ನಾಡಹಬ್ಬ ಉದ್ಘಾಟನೆಗೆ ಎರಡ್ಮೂರು ದಿನಗಳ ಮುನ್ನ ನಗರದಲ್ಲಿ ಪ್ರಚಾರ ಸಾಮಗ್ರಿ ಪ್ರತ್ಯಕ್ಷವಾದವು. ಅಲ್ಲಿಯವರೆಗೆ ನಗರದಲ್ಲಿ ದಸರಾ ನಡೆಯುತ್ತಿರುವ ಕುರುಹುಗಳೂ ಗೋಚರವಾಗಲಿಲ್ಲ.
ದಸರಾ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಿರಾಸಕ್ತಿ ತೋರಿದಂತೆ ಕಂಡಿತು. ಒಂದು ಸುದ್ದಿಗೋಷ್ಠಿ ಮಾಡಿ ದಸರಾ ಕುರಿತು ಮಾಹಿತಿ ನೀಡಲಿಲ್ಲ. ಕಾಲಕಾಲಕ್ಕೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಸಹ ಮಾಡಲಿಲ್ಲ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಸಹ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳಲಿಲ್ಲ. ಭದ್ರತೆ, ಕ್ರೀಡೆ, ಕವಿಗೋಷ್ಠಿ ಹೊರತುಪಡಿಸಿದರೆ ಯಾವುದೇ ಸಮಿತಿಯವರು ನೇರವಾಗಿ ಸುದ್ದಿಗಾರರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿಲ್ಲ.
ಎಲ್ಲೆಡೆ ಅಧಿಕಾರಿಗಳ ದರ್ಬಾರ್ ಕಣ್ಣು ಕುಕ್ಕಿತ್ತು. ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಕಡಿಮೆ ಇತ್ತು. ಲಾಬಿ, ಶಿಫಾರಸು ಮಾಡಿದವರಿಗೆ ಅವಕಾಶ ಕರುಣಿಸಲಾಯಿತು. ದುಂದುವೆಚ್ಚಕ್ಕೆ ಕಡಿವಾಣ ಹಾಕಲಿಲ್ಲ. ಸಿದ್ಧತೆ ಸೇರಿದಂತೆ ದಸರಾ ಚಟುವಟಿಕೆಗಳಲ್ಲಿ ಜನಪ್ರತಿನಿಧಿಗಳ ಸಕ್ರಿಯತೆಯೂ ಕಾಣಲಿಲ್ಲ.
ಜಂಬೂಸವಾರಿ, ದೀಪಾಲಂಕಾರ ಕಣ್ಮನ ಸೆಳೆದ ಕಾರ್ಯಕ್ರಮಗಳು. ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಈ ಸಲವೂ ಹೆಚ್ಚಿನ ಜನರನ್ನು ಆಕರ್ಷಿಸಿದವು. ಪಂಜಿನ ಕವಾಯತು, ಡ್ರೋನ್ ಶೋ, ಸಾರಂಗ್ ಹೆಲಿಕಾಪ್ಟರ್ ಮತ್ತು ‘ಸೂರ್ಯಕಿರಣ’ ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ ಜನರನ್ನು ರಂಜಿಸಿತು. ಉಳಿದಂತೆ ಇತರ ಕಾರ್ಯಕ್ರಮ ಮಾಮೂಲಿ ಎನಿಸಿದವು.
ಮಹಿಳಾ ಮತ್ತು ಮಕ್ಕಳ ದಸರಾ ಈ ಸಲ ಬಹಳ ಕಳಪೆಯಾಗಿತ್ತು. ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿ ಮುಗಿಸಲಾಯಿತು. ಮಕ್ಕಳ ದಸರಾವನ್ನು ಕಲಾಮಂದಿರದಲ್ಲಿ ಮತ್ತು ಮಹಿಳಾ ದಸರಾವನ್ನು ಜೆ.ಕೆ. ಮೈದಾನದಲ್ಲಿ ಮಾಡುವ ಮೂಲಕ ಜನರು ಬರದಂತೆ ಮಾಡಲಾಯಿತು. ಮಹಿಳಾ ದಸರಾ ವಸ್ತುಪ್ರದರ್ಶನದಲ್ಲಿ ಮೊದಲ ದಿನವೇ ಮಳಿಗೆಗಳು ಖಾಲಿ ಹೊಡೆಯುತ್ತಿದ್ದವು.
ಆಹಾರ ಮೇಳ, ಯುವ ದಸರಾಕ್ಕೆ ಹೋಗುವ ಜನರು ಪುಸ್ತಕ ಮೇಳಕ್ಕೆ ಹೋಗಲಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಪುಸ್ತಕಗಳು ಮಾರಾಟವಾಗಲಿಲ್ಲ. ಹೀಗಾಗಿ ದಸರಾ ಜಾತ್ರೆಯಲ್ಲಿ ಪುಸ್ತಕ ಮೇಳ ಆಯೋಜನೆ ಮಾಡಬಾರದು ಎಂಬ ಕೂಗು ಕೇಳಿಬರುತ್ತಿದೆ.
ಕುಸ್ತಿ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ಒಂದೇ ಸಲಕ್ಕೆ ಹತ್ತಾರು ಕ್ರೀಡೆಗಳು ನಡೆದವು. ಯಾವ ಸ್ಪರ್ಧೆ ಎಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯೇ ಸಾರ್ವಜನಿಕರಿಗೆ ಸಿಗಲಿಲ್ಲ. ಸ್ಪರ್ಧಿಗಳ ಹೊರತುಪಡಿಸಿ ಸಾರ್ವಜನಿಕರ ಭಾಗವಹಿಸುವಿಕೆ ಇರಲೇ ಇಲ್ಲ.
ಸಿದ್ಧಾರ್ಥನಗರದಲ್ಲಿರುವ ಕಾವಾ ಕಾಲೇಜಿನಲ್ಲಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ, ಕಲಾ ಸಂತೆ ಜನರಿಂದ ದೂರವಾಯಿತು. ಇಲ್ಲಿ ಏನು ಆಗುತ್ತಿದೆ ಎಂಬುದು ಜನರಿಗೂ ಗೊತ್ತಾಗಲಿಲ್ಲ. ಅಲ್ಲಿಗೆ ಸಾರ್ವಜನಿಕರು ಹೋಗುವ ಪ್ರಯತ್ನ ಮಾಡಲಿಲ್ಲ. ಹಿಂದೆ ನಗರದ ಮಧ್ಯಭಾಗದಲ್ಲಿ ಮಾಡಿದಂತೆ ಚಿತ್ರಸಂತೆ ಮಾಡಿದ್ದರೆ ಇದಕ್ಕೆ ಹೆಚ್ಚಿನ ಯಶಸ್ಸು ದೊರೆಯುತ್ತಿತ್ತು.
ದಸರಾಕ್ಕೆ ಮುನ್ನವೇ ಆಯೋಜನೆಯಿಂದ ಚಲನಚಿತ್ರೋತ್ಸವ ಸಫಲಗೊಂಡಿತು. ನಿರ್ದಿಷ್ಟ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸಿಯಾಯಿತು. ಆದರೆ ಸಿನಿ ಉತ್ಸವ ಮಲ್ಟಿಫ್ಲೆಕ್ಸ್‌ಮಯವಾಯಿತು. ಚಿತ್ರಮಂದಿರಗಳಲ್ಲಿ ಆಯೋಜಿಸಿದ್ದರೆ ಜನಸಾಮಾನ್ಯರಿಗೂ ಅಪರೂಪದ ಸಿನಿಮಾ ನೋಡುವ ಅವಕಾಶ ದೊರೆಯುತ್ತಿತ್ತು.
ದಸರಾ ಕವಿಗೋಷ್ಠಿ ಘನತೆಯನ್ನು ಈ ಸಲ ಮಣ್ಣು ಪಾಲು ಮಾಡಲಾಯಿತು. ಕಾವ್ಯ, ಸಾಹಿತ್ಯದ ಗಂಧಗಾಳಿಯೂ ಗೊತ್ತಿಲ್ಲದವರನ್ನೂ ಕವಿತೆ ವಾಚನಕ್ಕೆ ಆಹ್ವಾನಿಸಲಾಯಿತು. 3 ದಿನಕ್ಕೆ ಮುಗಿಯಬೇಕಿದ್ದ ಕವಿಗೋಷ್ಠಿಯನ್ನು 5 ದಿನಕ್ಕೆ ಎಳೆಯುವ ಮೂಲಕ ತಲೆಚಿಟ್ಟು ಹಿಡಿಯುವಂತೆ ಮಾಡಲಾಯಿತು.
ಜಂಬೂಸವಾರಿಗೂ 4-5 ದಿನಗಳ ಮುನ್ನವೇ ಯುವ ದಸರಾ, ರೈತ ದಸರಾ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲಾಯಿತು. ಈ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿಯುವ ಅವಕಾಶ ಸಿಗಲಿಲ್ಲ. ಹಗಲು ಹೊತ್ತಿನಲ್ಲಿ ದಸರೆ ಖಾಲಿ ಹೊಡೆಯುವಂತಾಯಿತು.
ರಂಗೋಲಿ ಸ್ಪರ್ಧೆ, ಯೋಗ ಪ್ರದರ್ಶನ ಮತ್ತು ಸ್ಪರ್ಧೆ, ಪಾರಂಪರಿಕ ಸೈಕಲ್ ಸವಾರಿ, ಪಾರಂಪರಿಕ ನಡಿಗೆ, ರೈತ ದಸರಾ, ಕೃಷಿ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಪಾರಂಪರಿಕ ಉಡುಗೆಯಲ್ಲಿ ದಂಪತಿಗಳ ಪಾರಂಪರಿಕ ಟಾಂಗಾ ಸವಾರಿ, ಯೋಗಚಾರಣಕ್ಕೆ ಹೊಸತನದ ಸ್ಪರ್ಶ ಇರಲಿಲ್ಲ. ಮಾಮೂಲಿಯಂತೆ ನಡೆದು ಮರೆಯಾಗಿ ಹೋದವು. ಇವುಗಳು ಜನಸಾಮಾನ್ಯರ ಗಮನ ಸೆಳೆಯಲಿಲ್ಲ. ಇವುಗಳು ಎಲ್ಲಿ ನಡೆದವೂ ಎಂಬುದು ಬಹಳಷ್ಟು ಜನರಿಗೆ ಅರಿವಿಗೂ ಬರಲಿಲ್ಲ.
ಜಂಬೂಸವಾರಿಯನ್ನು ಶಿಸ್ತುಬದ್ಧವಾಗಿ ನಡೆಸಿದ್ದು ಮೆಚ್ಚುಗೆಗೆ ಕಾರಣವಾಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಅನಗತ್ಯ ವ್ಯಕ್ತಿಗಳ ತಿರುಗಾಟಕ್ಕೆ ಅವಕಾಶ ನೀಡಲಿಲ್ಲ. ಪತ್ರಿಕಾ ಛಾಯಾಗ್ರಾಹಕರಿಗೂ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಸಭಿಕರು ಕಲಾತಂಡ ಪ್ರದರ್ಶನ, ಸ್ತಬ್ಧಚಿತ್ರವನ್ನು ಸುಲಲಿತವಾಗಿ ಕಣ್ತುಂಬಿಕೊಳ್ಳಲು ಅವಕಾಶವಾಯಿತು.
ಐತಿಹಾಸಿಕ ಘನತೆ ಹೊಂದಿರುವ ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದೆರಡು ಬಿಟ್ಟರೆ ಉಳಿದವುಗಳು ಚೆನ್ನಾಗಿರಲಿಲ್ಲ. ಹರಿಹರನ್, ವಿಜಯಪ್ರಕಾಶ್ ಬಿಟ್ಟರೆ ದೊಡ್ಡ ಕಲಾವಿದರನ್ನು ಆಹ್ವಾನಿಸಲು ಆಗಲಿಲ್ಲ. ಯುವ ದಸರಾದಲ್ಲೂ ಹೀಗೆ ಆಯಿತು. ರಾಷ್ಟ್ರಮಟ್ಟ ಕಲಾವಿದರನ್ನು ಆಹ್ವಾನಿಸಲು ಪರದಾಡುವಂತಾಯಿತು. ಕೊನೇ ಘಳಿಗೆಯಲ್ಲಿ ಯಾರೂ ಸಿಗಲಿಲ್ಲ. ಸಿಕ್ಕವರನ್ನು ಕರೆತಂದು ಕಾರ್ಯಕ್ರಮ ನಡೆಸಲಾಯಿತು.
ಕಲಾಮಂದಿಸರ, ಜಗನ್ಮೋಹನ ಅರಮನೆ, ಗಾನಭಾರತಿ ಸೇರಿದಂತೆ 9 ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಭಿಕರ ಕೊರತೆ ಕಾಡಿತು.
ಅರಮನೆ ಹೊರತುಪಡಿಸಿದರೆ ಎಲ್ಲಿಯೂ ಜನರು ಇರಲಿಲ್ಲ. ಖಾಲಿ ಕುರ್ಚಿಗಳ ನಡುವೆಯೇ ಕಲಾವಿದರು ಪ್ರದರ್ಶನ ನೀಡಿದರು. ಅರಮನೆ ಹೊರತುಪಡಿಸಿದರೆ ಉಳಿದ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.