ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಮುನಿರತ್ನ ಅವರನ್ನು ಗಡಿಪಾರು ಮಾಡುವಂತೆ ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ಪಧಾದಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಶಾಸಕ ಮುನಿರತ್ನ ದಲಿತ ಹಾಗೂ ಒಕ್ಕಲಿಗ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಗುತ್ತಿಗೆದಾರನ ಬಳಿ ಲಂಚಕ್ಕೂ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಕಾನೂನು ಕ್ರಮ ಜರುಗಿಸಿ ಎಂದು ಸಮಿತಿ ಅಧ್ಯಕ್ಷ ಆರ್.ಕಿರಣ್ ಕುಮಾರ್ ಒತ್ತಾಯಿಸಿದರು. ಶಾಸಕ ಮುನಿರತ್ನ ಅವರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿಪತ್ರ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಸಹದೇವ್, ಯುವ ಘಟಕದ ಅಧ್ಯಕ್ಷ ಗಜೇಂದ್ರ, ಪ್ರಚಾರ ಘಟಕ ಅಧ್ಯಕ್ಷ ಚಲವಾದಿ ನಾಗೇಶ್, ತಿಮ್ಮಪ್ಪನಹಳ್ಳಿ ಗ್ರಾಮಸ್ಥರಾದ ನಾರಾಯಣಸ್ವಾಮಿ, ರಾಮಾಂಜಿ, ಮಂಜು, ಸುಬ್ರಮಣ್ಯ, ಸಂದೀಪ್, ವನಿತ್, ಪವನ್ ಇದ್ದರು.
ದೇವನಹಳ್ಳಿ: ಜಾತಿನಿಂದನೆ ಮಾಡಿರುವ ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಹಸಿರು ಸೇನೆಯೆ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಬಿ.ಕೆ.ವಿನೋದಕುಮಾರಗೌಡ ಒತ್ತಾಯಿಸಿದ್ದಾರೆ. ಧರ್ಮ, ಜಾತಿ ಹೆಸರಿನಲ್ಲಿ ಇನ್ನೊಬ್ಬರನ್ನು ನೋಯಿಸಿ ಅಶಾಂತಿ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಜಾತಿ ಜಾತಿಗಳ ಮಧ್ಯೆ ಮಾತನಾಡುವ ರಾಜಕಾರಣಿಗಳು, ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕಿದೆ. ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಮುನಿರತ್ನ ಕೀಳು ಮನಸ್ಥಿತಿ ಹೊಂದಿದ್ದು, ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.