ಮಂಜುನಾಥ ಎಸ್.ಸಿ. ಹೊಸಕೋಟೆ
ತಾಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿದ್ದು, ಕೆರೆ-ಕುಂಟೆಗಳು ತುಂಬಿವೆ. ಕೃಷಿ ಕಾರ್ಯ ಬಿರುಸುಗೊಂಡಿದ್ದು, ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಗಳ ಖರೀದಿ ಜೋರಾಗಿದೆ.
ಕೃಷಿ ಇಲಾಖೆಯು ಏಪ್ರಿಲ್‌ನಿಂದ ಜೂನ್‌ವರೆಗೆ ತಾಲೂಕಿನಲ್ಲಿ 63.85 ಕ್ವಿಂಟಾಲ್ ಬಿತ್ತನೆ ರಾಗಿ ವಿತರಿಸಿದೆ. ಸದ್ಯ 94.4 ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನು ಇದೆ. 5.5 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಿಸಲಾಗಿದ್ದು, 4 ಕ್ವಿಂಟಾಲ್ ದಾಸ್ತಾನು ಇದೆ. ಅದರಂತೆ 5.72 ಕ್ವಿಂಟಾಲ್ ತೊಗರಿ ಬಿತ್ತನೆ ಬೀಜ ವಿತರಿಸಲಾಗಿದೆ. 48 ಕೆಜಿ ದಾಸ್ತಾನು ಇದ್ದು, 1.84 ಕ್ವಿಂಟಾಲ್ ಅಲಸಂದೆ ಬೀಜ ವಿತರಣೆಯಾಗಿದ್ದು, 56 ಕೆಜಿ ದಾಸ್ತಾನು ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಕ್ಟೇರ್‌ವಾರು ಬಿತ್ತನೆ ವಿವರ: ತಾಲೂಕಿನಲ್ಲಿ ಈ ಬಾರಿ 1,799 ಹೆಕ್ಟೇರ್ ರಾಗಿ, 155 ಹೆಕ್ಟೇರ್ ಮೇವಿನ ಜೋಳ, 74 ಹೆಕ್ಟೇರ್ ಮೆಕ್ಕೆಜೋಳ, 123 ಹೆಕ್ಟೇರ್ ತೊಗರಿ, 12 ಹೆಕ್ಟೇರ್ ಅಲಸಂದೆ, 14 ಹೆಕ್ಟೇರ್ ಅವರೆ, 6 ಹೆಕ್ಟೇರ್ ನೆಲಗಡಲೆ, 22 ಹೆಕ್ಟೇರ್ ಕಬ್ಬು ಬೆಳೆಯಲಾಗುತ್ತಿದೆ.
ಹಣ್ಣು ಮತ್ತು ತರಕಾರಿ ಬೆಳೆ ವಿವರ: ತಾಲೂಕಿನಲ್ಲಿ ಒಟ್ಟು 8,200 ಹೆಕ್ಟೇರ್ ಹಣ್ಣು, ತರಕಾರಿ ಹಾಗೂ ಹೂವು ಬೆಳೆಯುವ ಪ್ರದೇಶವಿದೆ. ಅದರಲ್ಲಿ 3,500 ಹೆಕ್ಟೇರ್ ಭೂಮಿಯಲ್ಲಿ ಮಾವು, 800 ಹೆಕ್ಟೇರ್ ಟೊಮ್ಯಾಟೊ, 500 ಹೆಕ್ಟೇರ್ ಬೀನ್ಸ್, 1200 ಹೆಕ್ಟೇರ್‌ನಲ್ಲಿ ರೋಸ್ ಹೂವು ಬೆಳೆಯಲಾಗುತ್ತಿದೆ. ಇನ್ನುಳಿದ ಪ್ರದೇಶದಲ್ಲಿ ಗೋಡಂಬಿ ಸೇರಿ ಹಲವು ತರಕಾರಿ ಬೆಳೆ ಹಾಕಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಗೊಬ್ಬರದ ಕೊರತೆ ಇಲ್ಲ: ತಾಲೂಕಿನಲ್ಲಿ ಡಿಎಪಿ ಗೊಬ್ಬರದ ದಾಸ್ತಾನಿನ ಕೊರತೆ ಉಂಟಾಗಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಪ್ರತಿದಿನವೂ ಗೊಬ್ಬರ ಖರೀದಿಗೆ ಪ್ರಯತ್ನಿಸುತ್ತಿರುವ ರೈತರು, ಗೊಬ್ಬರ ಸಿಗದೆ ಬರಿಗೈಲಿ ಹಿಂದಿರುಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ ಅಧಿಕಾರಿಗಳು, ತಾಲೂಕಿನಲ್ಲಿ ಗೊಬ್ಬರದ ದಾಸ್ತಾನಿನ ಕೊರತೆ ಇಲ್ಲ. ದಿನಕ್ಕೆ 40ರಿಂದ 50 ಟನ್ ಗೊಬ್ಬರಕ್ಕೆ ಬೇಡಿಕೆ ಇದೆ. ಆದರೆ, 10ರಿಂದ 15 ಟನ್ ಮಾತ್ರ ಪೂರೈಕೆಯಾಗುತ್ತಿದೆ. ಹೆಚ್ಚಿನ ದಾಸ್ತಾನಿಗೆ ಬೇಡಿಕೆ ಸಲ್ಲಿಸಿದ್ದು, ಅದು ಬರುತ್ತಲೇ ರೈತರಿಗೆ ಕೊಡಲಾಗುವುದು ಎಂದು ಹೇಳಿದ್ದಾರೆ.
ಸದ್ಯ ಡಿಎಪಿ ಗೊಬ್ಬರದ ಪೂರೈಕೆ ಕಡಿಮೆ ಇದೆ. ಗೊಬ್ಬರದ ಮೇಲಿನ ಸಹಾಯಧನ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿ, ಹೊರೆಯಾಗುತ್ತಿರುವ ಕಾರಣ ಗೊಬ್ಬರ ತಯಾರಿಕಾ ಕಂಪನಿಗಳು ಉತ್ಪಾದನೆ ಕಡಿಮೆ ಮಾಡಿವೆ. ಈ ಕಾರಣಕ್ಕಾಗಿ ರೈತರಿಗೆ ಪರ್ಯಾಯ ಗೊಬ್ಬರ ಬಳಕೆಗೆ ಮಾಹಿತಿ ನೀಡಲಾಗುತ್ತಿದೆ. ರೇಣುಕಾಪ್ರಸನ್ನ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ