ಬೆಂಗಳೂರು ಗ್ರಾಮಾಂತರ: ಶೀಘ್ರದಲ್ಲೇ ಹೊಸಕೋಟೆಯ ಏಳು ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಯಲಿದ್ದು, ಈ ಭಾಗದಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಲಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ಮುಳಬಾಗ ಹಾಗೂ ಅಟ್ಟೂರು ಭಾಗದಲ್ಲಿ ನಡೆಯುತ್ತಿರುವ ಕೆಸಿ ವ್ಯಾಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು.
ಒಪ್ಪಂದದಂತೆ ಕೋಲಾರಕ್ಕೆ ಹರಿಯುವ ಮಾರ್ಗ ಮಧ್ಯೆದಲ್ಲಿ ಹೊಸಕೋಟೆ ಕೆರೆಗಳಿಗೆ ನೀರು ತುಂಬಿಸಬೇಕಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲೆ ಈ ಬಗ್ಗೆ ಕರಾರು ಮಾತುಕತೆಯಾಗಿತ್ತು. ಆದರೆ ಈವರೆಗೆ ಒಂದು ಕೆರೆಗೆ ಮಾತ್ರ ನೀರು ಹರಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಹೊಸಕೋಟೆ ಭಾಗದ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸುವ ಬಗ್ಗೆ ಸಾರ್ವಜನಿಕರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಕೆಸಿ ವ್ಯಾಲಿ ಯೋಜನಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿದೆ ಸ್ಥಳ ಪರಿಶೀಲಿಸಲಾಯಿಗಿದೆ ಎಂದು ತಿಳಿಸಿದರು.
ಸುಳ್ಳು ಹೇಳುವುದೇ ಶಾಸಕರ ಕೆಲಸ: ಶಾಸಕ ಶರತ್ ಬಚ್ಚೇಗೌಡರ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಸಚಿವರು, ಇಲ್ಲಿನ ಕೆರೆಗಳಿಗೆ ನಾನೇ ನೀರು ಬಿಡಿಸಿದೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ಅವರಿಗೆ ಸುಳ್ಳು ಹೇಳುವ ಕೆಲಸ ಬಿಟ್ಟರೆ ಬೇರೆ ಕೆಲಸ ಇದ್ದಂತಿಲ್ಲ ಎಂದರು.
ಈ ಹಿಂದೆ ಈ ಯೋಜನೆಗೆ ಸಂಸದ ಬಚ್ಚೇಗೌಡರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಕೊಳಚೆ ನೀರು ತುಂಬಿಸಿ ಈ ಭಾಗವನ್ನು ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು. ಈಗ ಅವರ ಮಗ ಶಾಸಕ ಶರತ್ ಬಚ್ಚೇಗೌಡ ಅವರು ನಾನೇ ನೀರು ತುಂಬಿಸುತ್ತಿದ್ದೇನೆ ಎನ್ನುತ್ತಾರೆ. ಇದೆಲ್ಲ ಹೊಸಕೋಟೆ ಜನರಿಗೆ ಚೆನ್ನಾಗಿ ತಿಳಿಸಿದೆ. ನಾನು ಮತ್ತೆ ಹೇಳುವ ಪ್ರಮೇಯವಿಲ್ಲ ಎಂದರು.