ಜಿಲ್ಲೆ

ಹೊಸ ಶಿಕ್ಷಣ ನೀತಿ ಹಿಂಪಡೆಯಿರಿ

ಬೀದರ್: ಹೊಸ ರಾಷ್ಟ್ರೀಯ ಶೀಕ್ಷಣ ನೀತಿ-2020 ವಾಪಸ್ ಪಡೆಯಬೇಕೆಂದು ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್ಎಫ್ಐ) ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಕುರಿತು ಮಂಗಳವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ರವಾನಿಸಿ, ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿ ವಿರೋಧಿಯಾಗಿದೆ. ಶೈಕ್ಷಣಿಕ ಅಸಮಾನತೆ ಹುಟ್ಟುಹಾಕುವ ಮತ್ತು ಶಿಕ್ಷಣ ಕ್ಷೇತ್ರವನ್ನು ಹಿಂದಕ್ಕೆ ಒಯ್ಯುವಂಥ ಮಾರಕ ಮಸೂದೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿ ಪೆಟ್ಟು ಕೊಡುವ ಈ ನೀತಿ ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.

ಮನುವಾದಿ ಅಂಶಗಳನ್ನು ಈ ಕಾಯ್ದೆಯಲ್ಲಿ ತರಲು ಬಿಜೆಪಿ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಘ ಪರಿವಾರ ಸಹಕರಿಸಿದೆ. ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳ, ಪಾಲಕ-ಪೋಷಕರ ಹಾಗೂ ಜನಾಭಿಪ್ರಾಯ ಗಣನೆಗೆ ತೆಗೆದುಕೊಂಡಿಲ್ಲ. ಸಂಸತ್ ನಲ್ಲಿ ಸಹ ಇದರ ಕುರಿತು ಹೆಚ್ಚು ಚರ್ಚೆಗೆ ಅವಕಾಶ ನೀಡದೆ ಕರೊನಾ ಸಂದರ್ಭ ಬಳಿಸಿಕೊಂಡು ಮಸೂದೆ ಜಾರಿಗೆ ಸರ್ಕಾರ ಮುಂದಾಗಿದೆ. ಇದು ಜಾರಿ ಆಗಿದ್ದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಯಾಗಲಿದೆ ಎಂದು ಆರೋಪಿಸಿದ್ದಾರೆ.

ಸಮಿತಿ ಜಿಲ್ಲಾ ಅಧ್ಯಕ್ಷ ಅರುಣ ಕೋಡಗೆ, ಅವಿನಾಶ ಪಾಟೀಲ್, ಅಮರ್ ಗಾದಗಿ, ಸಚಿನ್ ಸಿಂಗೆನೊರ್, ರೋಶನ್ ಮಲ್ಕಾಪುರೆ, ಸೂರಜ್ ಚಿದ್ರೆ ಇತರರಿದ್ದರು.

ಹೊಸ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದ ಖಾಸಗೀಕರಣ ಮತ್ತು ಕೋಮುವಾದಿಕರಣಕ್ಕೆ ನೇರ ಅವಕಾಶ ಮಾಡಿಕೊಡಲಿದೆ. ಆದಿವಾಸಿ, ಬುಡಕಟ್ಟು ಹಾಗೂ ಕೆಳ ಸಮುದಾಯದ ವಿದ್ಯಾರ್ಥಿಗಳು ಸೇರಿ ದೇಶದ ಬಹುಸಂಖ್ಯಾತ ಗ್ರಾಮೀಣ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಇದು ವಂಚಿತಗೊಳಿಸಲಿದೆ.| ಅರುಣ ಕೋಡಗೆ, ಎಸ್ಎಫ್ಐ ಜಿಲ್ಲಾಧ್ಯಕ್ಷ