ಜಿಲ್ಲೆ

ಹೊಸ ಶಿಕ್ಷಣ ನೀತಿ ಕ್ರಾಂತಿಗೆ ಮುನ್ನುಡಿ

ಚಿಕ್ಕಬಳ್ಳಾಪುರ : ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಜಾರಿಯಿಂದ ದೇಶದ ಎಲ್ಲ ವರ್ಗದ ಮಕ್ಕಳಿಗೆ ಸಮಾನ ಅವಕಾಶ ಸಿಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ಜಿಲ್ಲಾ ಗುರುಭವನ ಕಟ್ಟಡ ನಿರ್ಮಾಣಕ್ಕೆ ತಾಲೂಕಿನ ಜಡಲತಿಮ್ಮನಹಳ್ಳಿ ಕ್ರಾಸ್‌ನಲ್ಲಿ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಶಿಕ್ಷಣದಲ್ಲೂ ಕಾಲಕಾಲಕ್ಕೆ ಸುಧಾರಣೆಗಳಾಗಬೇಕು. ಲೋಪಗಳನ್ನು ಸರಿಪಡಿಸಿ, ಹೊಸ ನೀತಿಗಳನ್ನು ರೂಪಿಸುವುದರಿಂದ ನಿರೀಕ್ಷೆ ಬದಲಾವಣೆ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹೊಸ ಕ್ರಾಂತಿಗೆ ಪೂರಕವಾದ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದರು.

ಎಲ್ಲ ವಲಯಗಳ ಮಾದರಿಯಲ್ಲಿ ಶಿಕ್ಷಕರ ವೃತ್ತಿಯಲ್ಲೂ ನಾನಾ ವೈಫರೀತ್ಯಗಳಿವೆ. ಇವುಗಳನ್ನು ಸರಿಪಡಿಸಬೇಕು. ದೇಶದಿಂದ ಬ್ರಿಟಿಷರು, ಪೋರ್ಚುಗೀಸ್, ಫ್ರೆಂಚರು, ಮೊಘಲರನ್ನು ಓಡಿಸಲಾಯಿತು. ಆದರೆ, ಸಾಮಾಜಿಕ ಪಿಡುಗು, ಜಾತಿ ಪದ್ಧತಿ ದೂರವಾಗಿಲ್ಲ. ಇದು ಸಮಾನತೆಗೆ ತೊಡಕಾಗಿದ್ದು, ಇದರ ಪರಿಹಾರ ಶಿಕ್ಷಕರ ಕೈಯಲ್ಲಿದೆ ಎಂದರು.

3 ದಶಕಗಳ ಹಿಂದೆಯೇ ಗುರುಭವನಕ್ಕೆ ಜಾಗ ಗುರುತಿಸಿದ್ದರೂ ಕೆಲಸ ಪ್ರಾರಂಭವಾಗಿಲ್ಲ. ಇದೀಗ ಹಲವು ವರ್ಷಗಳ ಶಿಕ್ಷಕರ ಮಹತ್ತರವಾದ ಬೇಡಿಕೆಯೂ ಈಡೇರುತ್ತಿದೆ, ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಹಾಗೆಯೇ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ಗೌರವ ಉಳಿಸಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಬಂಕ್ ಮುನಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಸೀಲ್ದಾರ್ ನಾಗಪ್ರಶಾಂತ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್ ಇತರರಿದ್ದರು.