ಚಿತ್ರದುರ್ಗ: ಜಮೀನು ಮಾಲೀಕರ ಸಹಭಾಗಿತ್ವದಲ್ಲಿ ಹೊಸ ಲೇಔಟ್‌ಗಳ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸಿದೆ.
ಪ್ರಸ್ತುತ ನಿಯಮಾನುಸಾರ ಶೇ.50-50 ಅನುಪಾತದಲ್ಲಿ ಪ್ರಾಧಿಕಾರ ಲೇಔಟ್ ನಿರ್ಮಿಸಬೇಕಿದೆ. ಭೂ ಪರಿಹಾರ ನೀಡುವುದು ದುಬಾರಿ ಎಂಬ ಕಾರಣಕ್ಕೆ ಸಹಭಾಗಿತ್ವದಲ್ಲಿ ಲೇಔಟ್‌ಗಳ ನಿರ್ಮಾಣಕ್ಕೆ ಸರ್ಕಾರ ಸೂಚಿಸಿತ್ತು. ಆದರೆ, ಸಹಭಾಗಿತ್ವದ ಅನುಪಾತಕ್ಕೆ ಜಮೀನು ಮಾಲೀಕರು ನಿರುತ್ಸಾಹ ತೋರುತ್ತಿದ್ದಾರೆ.
ನಗರದ ಲೋಕಲ್ ಪ್ಲಾನಿಂಗ್ ಏರಿಯಾದಲ್ಲಿರುವ ಜಮೀನಿಗೆ ಬೇಡಿಕೆ ಸಹಜ. ಖಾಸಗಿ ಡೆವಲಪರ್ಸ್ ಪೈಪೋಟಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಾಧ್ಯತಾ ವರದಿಯೊಂದಿಗೆ ಅನುಪಾತಕ್ಕೆ ತಿದ್ದುಪಡಿ ತರಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ಪಡೆಯಲು ಪ್ರಯತ್ನಿಸಬಹುದು.
ಈ ನಿಟ್ಟಿನಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ದಿವ್ಯಾಪ್ರಭು ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕದ್ವಯರು, ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
*2004ರ ನಂತರ ಅರ್ಜಿ ಕರೆದಿಲ್ಲ
ನಗರದಲ್ಲಿ 76 ಎಕರೆ ವಿಸ್ತೀರ್ಣದ ಧವಳಗಿರಿ ಹಾಗೂ ಈಶ್ವರಿ ಬಡಾವಣೆಗಳ ಬಳಿಕ ಪ್ರಾಧಿಕಾರದಿಂದ ಹೊಸ ಲೇಔಟ್‌ಗಳನ್ನು ನಿರ್ಮಿಸಿಲ್ಲ. ಹೀಗಾಗಿ ನಿವೇಶನ ಆಕಾಂಕ್ಷಿಗಳಿಂದ ಅರ್ಜಿ ಕರೆಯಲು ಸಾಧ್ಯವಾಗಿಲ್ಲ. ನಷ್ಟದ ಭೀತಿಯಿಂದ ಕುಂಚಿಗನಾಳ್ ಬಳಿ 5 ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಾಣ ಕೈಗೂಡಿಲ್ಲ.
ಸದ್ಯಕ್ಕೆ ಪ್ರಾಧಿಕಾರದ ಲೋಕಲ್ ಪ್ಲಾನಿಂಗ್ ಏರಿಯಾ (ಎಲ್‌ಪಿಎ) 12,778 ಹೆಕ್ಟೇರ್ ಅನ್ನು ಇನ್ನಷ್ಟು ವಿಸ್ತರಿಸಿದರೆ ಹೊಸ ಲೇಔಟ್ ನಿರ್ಮಿಸಲು ಸಾಧ್ಯವಾಗಬಹುದು. ಎಲ್‌ಪಿಎ ಪರಿಷ್ಕರಣೆ ಆದಲ್ಲಿ ಹೊಸದಾಗಿ ವಿಸ್ತರಣೆಯಾದ ಪ್ರದೇಶದಲ್ಲಿ ಹಾಲಿ ಅನುಪಾತಕ್ಕೂ ರೈತರು ಒಪ್ಪಬಹುದು. ಇಲ್ಲವೇ ಅನುಪಾತಕ್ಕೆ ತಿದ್ದುಪಡಿ ಕೋರಿ ಪ್ರಸ್ತಾವನೆ ಸಲ್ಲಿಸಬಹುದು. ಎಲ್‌ಪಿಎ ಪರಿಷ್ಕರಣೆಯಾದಲ್ಲಿ ಖಾಸಗಿ ಡೆವಲಪರ್ಸ್‌ಗಳ ಪೈಪೋಟಿ ಇರದೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
*ಕೆರೆ ಅಭಿವೃದ್ಧಿ:
ನಗರದ ಅರಸನಕೆರೆ ಅಭಿವೃದ್ಧಿಗೆ ಈಗಾಗಲೇ ಶಂಕುಸ್ಥಾಪನೆ ಆಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ಆರಂಭಿಸುವ ಮೂಲಕ ಕೆರೆಗೆ ಹರಿದು ಬರುವ ಕೊಳಚೆ ನೀರನ್ನು ನಿಯಂತ್ರಿಸಬೇಕಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಭೆ ಒಪ್ಪಿಗೆ ನೀಡಿದೆ.
*ರಿಂಗ್ ರೋಡ್:
ರಾ.ಹೆ.48ರ ನಾಮಕಲ್ ಗ್ಯಾರೇಜ್‌ನಿಂದ ಜೋಗಿಮಟ್ಟಿ ರಸ್ತೆವರೆಗೆ ಅಂದಾಜು 4 ಕಿ.ಮೀ.ರಿಂಗ್ ರೋಡ್ ನಿರ್ಮಾಣಕ್ಕೆ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದೆ.
*ಕೋಟ್
ಸಿಎ ಸೈಟ್‌ಗಳ ಮಂಜೂರು, ರಿಂಗ್ ರೋಡ್ ಹಾಗೂ ಹೊಸ ಲೇಔಟ್ ನಿರ್ಮಾಣ, ಮಠದ ಮುಂದಿನ ಕೆರೆ ಅಭಿವೃದ್ಧಿ ಇತ್ಯಾದಿ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಹೊಸ ಲೇಔಟ್ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಗಂಭೀರ ಚಿಂತನೆ ನಡೆಸಲಾಗಿದೆ.
ಕೆ.ಸಿ.ವೀರೇಂದ್ರ ಪಪ್ಪಿ, ಶಾಸಕ, ಚಿತ್ರದುರ್ಗ
*ಕೋಟ್
ರಾಜ್ಯದ ಇತರ ನಗರಗಳಲ್ಲಿ ಹಾಲಿ ಅನುಪಾತದೊಂದಿಗೆ ಸಹಭಾಗಿತ್ವದಲ್ಲಿ ಲೇಔಟ್‌ಗಳು ನಿರ್ಮಾಣವಾಗಿವೆ ಎಂದು ಕುಡಾ ಅಧಿಕಾರಿಗಳು ಹೇಳಿದ್ದಾರೆ. ಸಾಧ್ಯತಾ ವರದಿಯೊಂದಿಗೆ ಹೊಸ ಲೇಔಟ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದ್ದು, ಮುಂದಿನ ಸಭೆಯಲ್ಲಿ ವಿಷಯ ಮಂಡಿಸಲು ಸೂಚಿಸಿದ್ದೇನೆ.
ಜಿಆರ್‌ಜೆ ದಿವ್ಯಾಪ್ರಭು, ಡಿಸಿ, ಚಿತ್ರದುರ್ಗ