ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ಬಸ್ ಖರೀದಿಸಲು ೪೫ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ತಿಳಿಸಿದರು.
ಹೊಸ ಜೇವರ್ಗಿ ರಸ್ತೆಯ ಕೊಠಾರಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಮಹತ್ವದ ಪಾತ್ರ ವಹಿಸಿರುವ ರಸ್ತೆ ಸಾರಿಗೆ ಸಿಬ್ಬಂದಿಗೂ ಸರ್ಕಾರಿ ಸವಲತ್ತು ಸಿಗಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಮನಕ್ಕೆ ತಂದು ತಮ್ಮ ನ್ಯಾಯಯೋಚಿತ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣದಿಂದಾಗಿ ಮಹಿಳೆಯರ ಸಂಚಾರ ದುಪ್ಪಟ್ಟಾಗಿದೆ. ಇದರಿಂದ ಸಣ್ಣ ಪುಟ್ಟ ವ್ಯಾಪಾರ, ಆರ್ಥಿಕ ವಹಿವಾಟು ವೃದ್ಧಿಯಾಗಲಿದೆ. ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆ ಹಣ ಸಂಗ್ರಹವಾಗಲಿದೆ. ೧೯೯೬ರಿಂದ ಸಾರಿಗೆ ಸಂಸ್ಥೆ ನೌಕರರ ಸಂಘಗಳಿಗೆ ಚುನಾವಣೆ ನಡೆಸುವ ಬಗ್ಗೆ ಸಚಿವರ ಜತೆ ಚರ್ಚಿಸಲಾಗುವುದು ಎಂದರು.
ಕೂಟದ ಅಧ್ಯಕ್ಷ ಚಂದ್ರಶೇಖರ ಆರ್., ಯುವ ಮುಖಂಡ ಅಭಿಷೇಕ ಪಾಟೀಲ್ ಮಾತನಾಡಿದರು. ಕೂಟದ ಗೌರವಾಧ್ಯಕ್ಷ ಶೌಕತ್ ಅಲಿ ಆಲೂರ, ಹೋರಾಟಗಾರ ಬಿ.ಎಸ್. ಸುರೇಶ, ಸಾಹಿತಿ ಡಾ.ಶಿವಕುಮಾರ ಸೂರ್ಯವಂಶಿ, ಕೂಟದ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಚಂಪಕಾವತಿ, ಸತೀಶ, ಎನ್.ಭಾಸ್ಕರ್, ಎಸ್.ಎಸ್. ಸಜ್ಜನ್, ಬಿ.ಎಸ್. ಬಗಲಿ, ಗಣಪತಿ ಗೋಳಾ, ಎಸ್.ಎಸ್. ಕಮಠಾಣ, ದೇವರಾಜ ಚೌರ, ಶಿವಶಾಂತ ಮುನ್ನಳ್ಳಿ, ಎಂ.ಡಿ. ಯುನೂಸ್, ರಾಘವೇಂದ್ರ ಕುಲಕರ್ಣಿ, ನಾಗೇಶ ಪೂಜಾರಿ, ಸುಭಾಷ ಆಲೂರ್, ಶರಣಮ್ಮ, ಚನ್ನಮ್ಮ ಇತರರಿದ್ದರು.
ಜಯರಾಮ ರಾಠೋಡ್ ಸ್ವಾಗತಿಸಿದರು. ಚಂದ್ರಶೇಖರಯ್ಯ ಮಠ ನಿರೂಪಣೆ ಮಾಡಿದರು. ಸಿದ್ದಣ್ಣ ಸಿಕೇದ್ ವಂದಿಸಿದರು.