ಹಾವೇರಿ: ಅನಧಿಕೃತ ಖಾಸಗಿ ಬಡಾವಣೆಗಳ ರಚನೆಗೆ ಕಡಿವಾಣ ಹಾಕಿ. ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಹೊಸ ನಿವೇಶನ ರಚಿಸಿ, ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವ ಬಿ.ಎ. ಬಸವರಾಜ ಸೂಚಿಸಿದರು.
ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಶನಿವಾರ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಕುಡಿಯುವ ನೀರು ಯೋಜನೆ, ಒಳಚರಂಡಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ರೈತರ ಸಹಭಾಗಿತ್ವದಲ್ಲಿ ಹೊಸ ನಿವೇಶನ ರಚನೆಯಾಗಬೇಕು. ರೈತರಿಗೆ ಶೇ. 50 ಹಾಗೂ ಪ್ರಾಧಿಕಾರಕ್ಕೆ ಶೇ. 50ರ ಹಂಚಿಕೆ ಪ್ರಮಾಣದಲ್ಲಿ ಜಮೀನು ಪಡೆದು ನಿವೇಶನವಾಗಿ ಅಭಿವೃದ್ಧಿಪಡಿಸಿ. ಇದನ್ನು ತ್ವರಿತವಾಗಿ ಕೈಗೊಳ್ಳಿ’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಂಪನ್ಮೂಲ ಕ್ರೋಢೀಕರಣ ಕಾಮಗಾರಿಗಳಿಗೆ ಒತ್ತು ನೀಡಬೇಕು. ಸಿಎ ಸೈಟ್ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ. ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಖಾಸಗಿ ಬಡಾವಣೆಗಳ ನಿರ್ವಣದಿಂದ ಸರ್ಕಾರಕ್ಕೆ ಆದಾಯವೂ ಕಡಿಮೆ, ಜನರಿಗೆ ಸಮಸ್ಯೆಯೂ ಹೆಚ್ಚು. ಇದರ ಬದಲಾಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ನಿವೇಶನ ರಚನೆ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ರಾಣೆಬೆನ್ನೂರ ಹಾಗೂ ಹಾವೇರಿ ನಗರದ ಒಳಚರಂಡಿ ಕಾಮಗಾರಿಗಳು ಹಾಗೂ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ ಅಸಮಾಧಾನ ವ್ಯಕ್ತಪಡಿಸಿ, ಕೆಲವೆಡೆ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂದು ಸಚಿವರ ಗಮನಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಶಾಸಕರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಲೋಪವನ್ನು ಸರಿಪಡಿಸಬೇಕು. ಇದಕ್ಕಾಗಿಯೇ ಶಾಸಕರನ್ನು ಆಹ್ವಾನಿಸಿ ಪ್ರತ್ಯೇಕ ಸಭೆ ನಡೆಸಬೇಕು. ಮುಂದಿನ ಆಗಸ್ಟ್ 15ರೊಳಗಾಗಿ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಆಗಸ್ಟ್ 15ಕ್ಕೆ ರಾಣೆಬೆನ್ನೂರಿನ ಕುಡಿಯುವ ನೀರು ಮತ್ತು ಯುಜಿಡಿ ಕಾಮಗಾರಿಗಳ ಉದ್ಘಾಟನೆ ಹಾಗೂ ಹಾವೇರಿ ನಗರದ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ವೇಳೆಗೆ ಕಾಮಗಾರಿ ಸಿದ್ಧವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.
ಶಿಗ್ಗಾಂವಿ ಪಟ್ಟಣದ ಯುಜಿಡಿ ಯೋಜನೆ, ಸವಣೂರ, ಹಿರೇಕೆರೂರು ಪಟ್ಟಣದ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆಯ ಪರಿಷ್ಕೃತ ಯೋಜನೆ, ಶಿಗ್ಗಾಂವಿ, ಸವಣೂರ, ಬಂಕಾಪುರ ಕುಡಿಯುವ ನೀರಿನ ಯೋಜನೆಗೆ ಪರ್ಯಾಯ ಜಲಾಶಯ ನಿರ್ವಣ, ಹಾನಗಲ್ಲ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗಳನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸುವಂತೆ ಇಂಜಿನಿಯರ್ಗಳಿಗೆ ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ನಗರಸಭೆ ಆಯುಕ್ತರಾದ ಬಸವರಾಜ ಜಿದ್ದಿ, ಡಾ. ಮಹಾಂತೇಶ, ಒಳಚರಂಡಿ ಮಂಡಳಿ, ನಗರ ನೀರು ಸರಬರಾಜು ಮಂಡಳಿಯ ವಿವಿಧ ಇಂಜಿನಿಯರರು ಉಪಸ್ಥಿತರಿದ್ದರು.
ಜಿಲ್ಲೆಯ ನಗರ ಪ್ರದೇಶಗಳಲ್ಲಿ ಯುಜಿಡಿ ಕಾಮಗಾರಿ ಅನುಷ್ಠಾನಕ್ಕೆ ನಿವೇಶನ ಸಮಸ್ಯೆಗಳ ತಕಾರರುಗಳಿದ್ದರೆ ಜಿಲ್ಲಾಧಿಕಾರಿ ಸಂರ್ಪಸಿ ಬಗೆಹರಿಸಿಕೊಳ್ಳಬೇಕು. ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ಹಾಗೂ ಮಂದಗತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಸಮರ್ಪಕ ಕೆಲಸವಾಗದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಸವರಾಜು ಎಚ್ಚರಿಕೆ ನೀಡಿದರು.