ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆಯ ತಾತ್ಕಾಲಿಕ ಅನುಮೋದಿತ ಸೀಮಾರೇಖೆ ನಕಾಶೆ ನೋಟ 
ಜಿಲ್ಲೆ

ಹೊಸ ಬಡಾವಣೆ ನಿರ್ಮಾಣ ಕಾರ್ಯ ಶುರು

ಅರಸೀಕೆರೆ: ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆಯ ತಾತ್ಕಾಲಿಕ ಅನುಮೋದಿತ ಸೀಮಾರೇಖೆ ವಿಸ್ತಾರಕ್ಕೆ ಸರ್ಕಾರ ಜ.31ರಂದು ಆದೇಶ ಹೊರಡಿಸಿದ್ದು, ಇದಕ್ಕೆ ಪೂರಕ ಎನ್ನುವಂತೆ ನಗರ ಪರಿಮಿತಿಯ 5.65 ಕಿ.ಮೀ. ಗಡಿ ಗುರುತಿಸಿ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದ್ದು, ಹೊಸ ಬಡಾವಣೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

20 ವರ್ಷದಲ್ಲಿ ನಗರದ ಸಮಗ್ರ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಅಂದಾಜಿಸಿ ಕೈಗೊಳ್ಳಬಹುದಾದ ಚಟುವಟಿಕೆಗಳಿಗೆ 3853.76 ಹೆಕ್ಟೇರ್ ಪೈಕಿ 2107.55 ಹೆಕ್ಟೇರ್ ಪ್ರದೇಶವನ್ನು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆಯ ವ್ಯಾಪ್ತಿಗೆ ತರಲಾಗಿದೆ. ವಸತಿ ನಿರ್ಮಾಣಕ್ಕೆ 1047.98 ಹೆಕ್ಟೇರ್ (ಶೇ.49.73), ವಾಣಿಜ್ಯ ಚಟುವಟಿಕೆಗಳಿಗೆ 126.96, ಕೈಗಾರಿಕೆಗೆ 62.52, ಸಾರ್ವಜನಿಕ, ಅರೆ ಸಾರ್ವಜನಿಕ ಉಪಯೋಗಕ್ಕೆ 96.19, ಉದ್ಯಾನವನ ಬಯಲು ಪ್ರದೇಶಕ್ಕೆ 250.41, ಸಾರ್ವಜನಿಕ ಉಪಯುಕ್ತತೆಗೆ 17.99 ಮತ್ತು ಸಾರಿಗೆ ಸಂಪರ್ಕ ವಲಯಕ್ಕೆ 505.50 ಹೆಕ್ಟೇರ್ ಭೂಮಿ ಮೀಸಲಿರಿಸುವಂತೆ ಕಳೆದೆರಡು ವರ್ಷದ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಅದರಂತೆ ಗ್ರಾಮಠಾಣಾ 24.36, ಅರಣ್ಯ 133.48, ಜಲಮೂಲ 391.55 ಹಾಗೂ ಕೃಷಿ ಭೂಮಿ 1196.76 ಸೇರಿ 3853.76 ಹೆಕ್ಟೇರ್ ಗಡಿ ಗುರುತಿಸಿದೆ.

ಮನವಿ ಪುರಸ್ಕರಿಸಿರುವ ಸರ್ಕಾರ ಕಳೆದ ಜನವರಿಯಲ್ಲಿ ತಾತ್ಕಾಲಿಕ ಅನುಮೋದನೆ ನೀಡಿ ಆದೇಶ ಹೊರಡಿಸಿರುವುದರಿಂದ ಸ್ವಂತ ಸೂರು ಹೊಂದಬೇಕೆನ್ನುವ ಬಡ, ಮಧ್ಯಮ ವರ್ಗದ ಜನರ ದಶಕಗಳ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ.

ಅನುಮೋದಿತ ನಕಾಶೆಯಂತೆ ಅಂದಾಜು 5.65 ಕಿ.ಮೀ ನಗರ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳ ನಿರ್ಮಾಣವಾಗಲಿವೆ ಎನ್ನಲಾಗಿದೆ. ಕಾಳನಕೊಪ್ಪಲು, ಕಾಟೀಕೆರೆ, ಮುದ್ದನಹಳ್ಳಿ, ಗುಂಡ್ಕಾನಹಳ್ಳಿ, ಜಾಜೂರು, ಕಲ್ಲನಾಯ್ಕನಹಳ್ಳಿ, ಭೈರನಾಯ್ಕನಹಳ್ಳಿ, ಹೊಸಳ್ಳಿ, ನಾಗತಿಹಳ್ಳಿ, ಗೀಜಿಹಳ್ಳಿ, ತಿರುಪತಿಹಳ್ಳಿ, ಕಾರೇಹಳ್ಳಿ, ಅಮರಗಿರಿ ಮಾಲೇಕಲ್ ತಿರುಪತಿ, ಕೆರೆ ಕೋಡಿಹಳ್ಳಿ ಗ್ರಾಮಗಳು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆಯ ಪರಿಮಿತಿಗೆ ಸೇರ್ಪಡೆಗೊಂಡಿವೆ. ಜತೆಗೆ ಸಹಸ್ರಾರು ಎಕರೆ ಕೃಷಿ ಭೂಮಿ ಸದ್ದಿಲ್ಲದೇ ಕರಗುವ ಅಪಾಯವೂ ಎದುರಾಗಿದ್ದು, ತಮಗಿರುವ ಅಲ್ಪಸ್ವಲ್ಪ ಜಮೀನು ಕೊಟ್ಟು ಹಣ ಪಡೆಯಬೇಕೆ, ಬೇಡವೇ ಎನ್ನುವ ಅಡಕತ್ತರಿಯಲ್ಲಿ ಅನ್ನದಾತ ಸಿಲುಕಿದ್ದಾರೆ. ಅನುಮೋದಿತ ಭೂಪ್ರದೇಶದ ಬಹುತೇಕ ಹಳ್ಳಿಗಳು ಗ್ರಾಮ ಪಂಚಾಯಿತಿಗಳಿಂದ ಬಿಡುಗಡೆಗೊಂಡು ನಗರಸಭೆ ಆಡಳಿತಕ್ಕೆ ಒಳಪಡಲಿರುವುದು ಮತ್ತೊಂದು ವಿಶೇಷ.

ಆರೋಪ: ಬಿಳಿ(ಕೃಷಿ) ಹಸಿರು(ಉದ್ಯಾನವನ) ಹಳದಿ (ಸಾರ್ವಜನಿಕ) ಕೆಂಪು(ಕೈಗಾರಿಕೆ) ಭೂಪ್ರದೇಶದ ಪರಿವರ್ತನೆಯನ್ನು ಅವೈಜ್ಞಾನಿಕವಾಗಿ ಮಾರ್ಪಡಿಸಲಾಗಿದೆ. ಜತೆಗೆ ಅರೆ ಸಾರ್ವಜನಿಕ, ಸಾರ್ವಜನಿಕ ಸ್ಥಳಕ್ಕೆ ಮೀಸಲುಗೊಳಿಸಿರುವುದು ನೈಜ ಭೂಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂ ಮಾಫಿಯಾ, ರಿಯಲ್ ಎಸ್ಟೇಟ್ ಉದ್ಯಮಿಗಳು ಸಕ್ರಿಯವಾಗಿದ್ದು ಮನಬಂದಂತೆ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಗಂಭೀರ ಹಾಗೂ ಗುರುತರ ಆರೋಪಗಳೂ ನಾಗರಿಕರಿಂದ ಕೇಳಿಬಂದಿವೆ. ಅನುಮೋದಿತ ನಕಾಶೆಯಲ್ಲಿ ಲೋಪವಿದೆ ಎನ್ನುವ ದೂರುಗಳ ನಡುವೆಯೂ ಕೃಷಿ ಜಮೀನು ಖರೀದಿ ಹಾಗೂ ಬಡಾವಣೆ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮೂಲ ನಕಾಶೆ ವಿನ್ಯಾಸ ತಿದ್ದುಪಡಿಯ ಕುರಿತು 250 ಆಕ್ಷೇಪಣೆ ಅರ್ಜಿಗಳು ಬಂದಿದ್ದು, ಕೇವಲ 35 ಸ್ವೀಕೃತಗೊಂಡಿವೆ.

ವರ್ಗಾವಣೆ : ಕಳೆದೊಂದು ವರ್ಷದಿಂದ ವಿವಿಧ ಕಾರಣಗಳಿಂದಾಗಿ ನಾಲ್ವರು ಎಇಇಗಳು ಬದಲಾಗಿದ್ದಾರೆ. ರಾಘವೇಂದ್ರ ಹಾಗೂ ಶರತ್ ಪದೋನ್ನತಿಯಿಂದ ವರ್ಗಾವಣೆಗೊಂಡು ಹೋಗಿದ್ದಾರೆ. ಶಿವಣ್ಣ ತಾಮ್ರಣ್ಣನವರ್ ಕೇವಲ ಐದಾರು ತಿಂಗಳಲ್ಲಿ ಜಾಗ ಖಾಲಿ ಮಾಡಿದ್ದಾರೆ. ಪ್ರಸ್ತುತ ಎಇಇ ದಿವ್ಯಶ್ರೀ ಕರ್ತವ್ಯದಲ್ಲಿದ್ದು ಹೊಸ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಮಹಾಯೋಜನೆಗೆ ಅನುಮೋದನೆ ದೊರೆಯಲಿದೆ ಎನ್ನುವ ಸುಳಿವು ಪಡೆದಿದ್ದ ಕೆಲ ಪ್ರಭಾವಿಗಳು ಘೋಷಿತ ಪ್ರದೇಶದಲ್ಲಿ ರೈತರಿಂದ ಗುಂಟೆ ಲೆಕ್ಕದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹತ್ತಾರು ಹೆಕ್ಟೇರ್ ಭೂಮಿ ಖರೀದಿಸಿದ್ದಾರೆ. ಇದೀಗ ತಮ್ಮ ಕರಾಮತ್ತು ಬಳಸಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಮುಂದಾಗಿದ್ದು ಜಮೀನು ಕಳೆದುಕೊಂಡವರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ. ಮತ್ತೊಂದೆಡೆ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರಾಧಿಕಾರ ಹಾಗೂ ನಗರಸಭೆ ಕಚೇರಿಗೆ ತೆರಳಿ ಅನುಮೋದನೆ ಪಡೆದುಕೊಳ್ಳುತ್ತಿರುವ ಭರಾಟೆ ಜೋರಾಗಿರುವ ದೃಶ್ಯ ನಿತ್ಯವೂ ಕಂಡುಬರುತ್ತಿದೆ.

ಕೃಷಿ ಭೂಮಿಗೆ ಬಂಗಾರದ ಬೆಲೆ : ಸರ್ಕಾರದ ಸೀಮಾರೇಖೆ ವಿಸ್ತಾರದ ಆದೇಶ ಹೊರ ಬಿದ್ದ ಬಳಿಕ ನಗರ ವ್ಯಾಪ್ತಿಯ ನಿವೇಶನಗಳ ಬೆಲೆ ಕುಸಿದಿದ್ದು ಕೇಳುವವರಿಲ್ಲ ಎನ್ನುವಂತಾಗಿದೆ. ಜತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಗರದ ಹೊರವಲಯದಲ್ಲಿ ಸುಸಜ್ಜಿತ ಚತುಷ್ಪಥ ರಸ್ತೆ ನಿರ್ಮಿಸಿರುವುದರಿಂದ ನಿವೇಶನ ಕೊಳ್ಳವವರ ಚಿತ್ತ ಇದೀಗ ನಗರದ ಹೊರವಲಯದತ್ತ ನೆಟ್ಟಿದೆ. ಸದ್ಯ ಕೃಷಿ ಭೂಮಿಗೆ ಬಂಗಾರದ ಬೆಲೆ ಬಂದಿರುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ರತ್ನಗಂಬಳಿ ಹಾಸಿದಂತಾಗಿದೆ.

ಬಡ, ಮಧ್ಯಮ ವರ್ಗದ ಜನರ ನಿವೇಶನ ಕೊಳ್ಳುವ ಆಶಯಕ್ಕೆ ಸರ್ಕಾರ ಮುನ್ನುಡಿ ಬರೆದಿದೆ. ಹತ್ತು ಹಲವು ಕಾರಣಗಳಿಂದಾಗಿ ಹಸಿರು, ಹಳದಿ, ಕೆಂಪು, ಬಿಳಿ ಬಣ್ಣದ ಭೂಪ್ರದೇಶ ಪರಿವರ್ತನೆಯಾಗಿದ್ದು, ಲೋಪ ಸರಿಪಡಿಸಲಾಗಿದೆ. ಉದ್ದೇಶಿತ ಬದಲಾವಣೆಗಳನ್ನು ಎರಡು ವರ್ಷಗಳ ಬಳಿಕ ಪ್ರಾಧಿಕಾರದ ಕಚೇರಿಗೆ ಸಲ್ಲಿಸಿ ಭೂಪರಿವರ್ತನೆ ಮಾಡಿಕೊಳ್ಳಲು ಅವಕಾಶವಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
ಕಾಟೀಕೆರೆ ಪ್ರಸನ್ನಕುಮಾರ್ ಅಧ್ಯಕ್ಷ, ಸ್ಥಳೀಯ ನಗರ ಯೋಜನಾ ಪ್ರಾಧಿಕಾರ

ಉದ್ದೇಶಿತ ನಕಾಶೆಯಲ್ಲಿ ಕೃಷಿ, ಕೈಗಾರಿಕೆ, ಉದ್ಯಾನವನ ಮೀಸಲು, ಸಾರ್ವಜನಿಕ, ಅರೆಸಾರ್ವಜನಿಕ, ರಸ್ತೆ ನಿರ್ಮಾಣ ಸೇರಿ ಹಲವೆಡೆ ಭಾರಿ ಬದಲಾವಣೆಗಳಾಗಿವೆ. ಆಕ್ಷೇಪಣೆ ಸಲ್ಲಿಕೆ ಬಳಿವೂ ಲೋಪ ಸರಿಪಡಿಸುವ ಕೆಲಸವಾಗಿಲ್ಲ. ಇದರಿಂದಾಗಿ ಭೂ ಮಾಲೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು, ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ಇತ್ತ ಗಮನಹರಿಸಲಿ.
ಎಸ್‌ಎಲ್‌ಎನ್ ವಿಜಯಕುಮಾರ್ ಭೂ ಮಾಲೀಕರು ಅರಸೀಕೆರೆ