ಜಿಲ್ಲೆ

ಹೊಸ ಪ್ರಬೇಧದ ಪರಾವಲಂಬಿ ಕಣಜ ಹುಳು ಪತ್ತೆ

ಚಾಮರಾಜನಗರ: ಜೀವ ವೈವಿಧ್ಯದಿಂದ ಕೂಡಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಹೊಸ ಪ್ರಬೇಧದ ಪರಾವಲಂಬಿ ಕಣಜ ಹುಳುವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಏಟ್ರಿ (ASHOKA Trust for Research in Ecology and the Environment) ಸಂಸ್ಥೆಯ ಸಂಶೋಧಕರಾದ ರಂಜಿತ್ ಎ‌.ಪಿ. ಮತ್ತು ಪ್ರಿಯದರ್ಶಿನ್ ಧರ್ಮರಾಜನ್, ಈ ಕಣಜ ಪ್ರಬೇಧವನ್ನು ಕಂಡು ಹಿಡಿದಿದ್ದಾರೆ. ಬಿಳಿಗಿರಿರಂಗನ ಬೆಟ್ಟದ ಜತೆಗೆ ತಮಿಳುನಾಡಿನ ಕಲಕಾಡ್ ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ, ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ ಮತ್ತು ಉತ್ತರಖಂಡದ ತೆಹ್ರಿ ಸೇರಿದಂತೆ ದೇಶದ 4 ಕಡೆ ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ ಹಚ್ಚಿ ಸಂಶೋಧನಾ ವರದಿ ಪ್ರಕಟಿಸಿದ್ದಾರೆ‌‌.

ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾದ ಕಣಜಕ್ಕೆ ಕಾಳಿಂಗ ಸರ್ಪದ ಸಂಶೋಧನೆ ಮತ್ತು ಸಂರಕ್ಷಣೆಗೆ ದುಡಿದಿರುವ ಡಾ.ಪಿ.ಗೌರಿಶಂಕರ್ ಹೆಸರಿಡಲಾಗಿದೆ. ಕೆಲ ತಿಂಗಳ ಹಿಂದೆಯಷ್ಟೇ ಇದೇ ಸಂಶೋಧನಾ ತಂಡ ಹೊಸ ಪ್ರಬೇಧದ ಹಲ್ಲಿ ಹಾಗೂ ಕಣಜವನ್ನು ಪತ್ತೆ ಮಾಡಿದ್ದರು.