ಜಿಲ್ಲೆ

ಹೊಸ ಪೀಳಿಗೆಗೆ ಫ.ಗು.ಹಳಕಟ್ಟಿ ಸಾಧನೆ ತಿಳಿಸಿ

ಮೈಸೂರು: ವಚನ ಸಾಹಿತ್ಯ ಸಂರಕ್ಷಣೆ ಕೆಲಸವನ್ನು ಕನ್ನಡದ ಸಾಕ್ಷಿಪ್ರಜ್ಞೆಯ ಭಾಗವಾಗಿ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಎಸ್.ಡಿ.ಶಶಿಕಲಾ ಹೇಳಿದರು.

ಶರಣ ಸಾಹಿತ್ಯ ಪರಿಷತ್ ನಗರ ಘಟಕದ ವತಿಯಿಂದ ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಾ.ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ ಮಹತ್ವದ ಕಾರ್ಯವನ್ನು ಕೈಗೊಳ್ಳುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಈ ಕೆಲಸವನ್ನು ಸ್ಮರಿಸಬೇಕು. ಜತೆಗೆ ಅವರ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಹಳಕಟ್ಟಿ ಅವರ ಜನ್ಮ ದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಇದರಿಂದ ವಚನ ಸಾಹಿತ್ಯ ಕುರಿತು ಅರಿವು, ಹಳಕಟ್ಟಿ ಅವರ ಸಾಧನೆ ತಿಳಿಸಲು ಅನುಕೂಲವಾಗಲಿದೆ. ಅವರ ಸಾಧನೆಯನ್ನು ಹೊಸ ಪೀಳಿಗೆಗೆ ತಿಳಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ ಮಾತನಾಡಿ, ವಚನ ಸಾಹಿತ್ಯ ಸಂರಕ್ಷಣೆಗಾಗಿ ಡಾ.ಹಳಕಟ್ಟಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಈ ಮೂಲಕ ಕರುನಾಡಿಗೆ ದೊಡ್ಡ ಆಸ್ತಿಯನ್ನು ಉಳಿಸಿಹೋಗಿದ್ದಾರೆ ಎಂದರು.

ಈಗಿನ ಕಾಲದಲ್ಲಿ ಆಸ್ತಿ ಮಾಡಲು ಎಲ್ಲರೂ ಹಾತೊರೆಯುತ್ತಾರೆ. ಆದರೆ, ನೂರು ವರ್ಷಗಳ ಹಿಂದೆ ಹಳಕಟ್ಟಿ ಅವರು ಆಸ್ತಿ, ಹುದ್ದೆ ಸಂಪಾದಿಸಲು ಹೋಗಲಿಲ್ಲ. ಬಿಎ, ಎಲ್‌ಎಲ್‌ಬಿ ಮುಗಿಸಿ ವಕೀಲರಾಗಿದ್ದ ಅವರು ಮನಸ್ಸು ಮಾಡಿದ್ದರೆ ದೊಡ್ಡ ನ್ಯಾಯಮೂರ್ತಿ ಸ್ಥಾನ ಅಥವಾ ಉನ್ನತ ಹುದ್ದೆಗಳನ್ನೂ ಅಲಂಕರಿಸಬಹುದಿತ್ತು. ಅದನ್ನು ನಿರಾಕರಿಸಿ ತಾಳೆಗರಿಯಲ್ಲಿ ಅಡಗಿದ್ದ ವಚನ ಸಾಹಿತ್ಯವನ್ನು ಶೋಧಿಸಿ, 12ನೇ ಶತಮಾನದಲ್ಲಿ ಶಿವಶರಣರು ರಚನೆ ಮಾಡಿದ್ದ ವಚನಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇದುವೇ ನಿಜವಾದ ಆಸ್ತಿ. ಇದು ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿ ಎಂದರು.

ಪರಿಷತ್ ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ದತ್ತಿ ದಾನಿಗಳಾದ ಕಾಂತಾಮಣಿ, ಎಂ.ಮರಿಸ್ವಾಮಿ, ಕಾರ್ಯದರ್ಶಿ ಟಿ.ಎಸ್.ಕುಮಾರಸ್ವಾಮಿ ಇದ್ದರು.