ಮೈಸೂರು: ಕೇಳುವ ನೋಡುವ ಯುಗದಲ್ಲಿ ಪುಸ್ತಕ ಸಂಸ್ಕೃತಿ ಅಳಿಯುತ್ತಿದೆ ಎಂದು ಚಿಂತಕ, ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ಕಳವಳ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ‘ಸಂಸ್ಕೃತಿ ನಿರ್ಮಾಣದಲ್ಲಿ ಪ್ರಸಾರಾಂಗದ ಪಾತ್ರ’ ಕುರಿತು ಮಾತನಾಡಿದರು.
500 ಪುಟಗಳ ಪುಸ್ತಕವನ್ನು ಯಾರು ಓದುತ್ತಾರೆ? ಹೊಸ ತಲೆಮಾರಿನ ಓದುವ ಕ್ರಮ ಬದಲಾಗಿದೆ. ಸಾಂಪ್ರದಾಯಿಕವಾಗಿಲ್ಲ. ಪ್ರಸಾರಾಂಗ ಮತ್ತು ಗ್ರಂಥಾಲಯಗಳಿಂದ ಡಿಜಿಟಲ್ ವೇದಿಕೆಗೆ ವರ್ಗಾವಣೆಗೊಂಡಿದ್ದಾರೆ. ಜ್ಞಾನಕ್ಕಿಂತ ಮಿಗಿಲಾದದ್ದು ಇಲ್ಲ. ಆದರೆ, ಅಕ್ಷರ ಕಲಿತವರೇ ಹೆಚ್ಚು ಭ್ರಷ್ಟರಾಗಿದ್ದಾರೆ. ಸಾಕ್ಷರತೆಗೆ ಮನುಷ್ಯತ್ವ ಮತ್ತು ವಿವೇಕ ಕೂಡಬೇಕಾಗಿದೆ ಎಂದರು.
ಶಿಕ್ಷಣ ಪಶುವನ್ನು ಮನುಷ್ಯನನ್ನಾಗಿ ಮಾಡುತ್ತದೆ ಎಂದು ಕುವೆಂಪು ಹೇಳಿದ್ದರು. ಆದರೀಗ ವಾಟ್ಸ್‌ಆ್ಯಪ್‌ಗಳಲ್ಲಿ ದ್ವೇಷ ಕಕ್ಕಲಾಗುತ್ತಿದೆ. ಪರಂಪರೆ ಮತ್ತು ದಾರ್ಶನಿಕರ ಬಗ್ಗೆ ಅಹಸನೆ ಮೂಡುತ್ತಿದೆ. ಕುವೆಂಪು ಅವರ ಬಗ್ಗೆ ಏಕವಚನದಲ್ಲಿ ನಿಂದಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ಆದಿಯಾಗಿ ಹಿಂದಿನ ಮಹನೀಯರು ಮಹಾಕಾವ್ಯ ಬರೆದು ದೊಡ್ಡವರಾಗಲಿಲ್ಲ. ಜನತಾ ಪ್ರಜ್ಞೆಯಿಂದ ದೊಡ್ಡವರಾದರು. ರೈತರು, ಜನ ಸಾಮಾನ್ಯರ ತೆರಿಗೆಯಿಂದ ವಿಶ್ವವಿದ್ಯಾಲಯ ನಡೆಯುತ್ತದೆ ಎಂದು ನಂಬಿದ್ದರು. ಅದಕ್ಕೆ ಬದ್ಧರಾಗಿ ತಮ್ಮ ವೃತ್ತಿಯನ್ನು ನಡೆಸಿದರು ಎಂದು ತಿಳಿಸಿದರು.
ಕವಿ ಕುವೆಂಪು ಮತ್ತು ದೇಜಗೌ ಕುಲಪತಿಗಳಾಗಿ ಪ್ರಚಂಡ ಕಾರ್ಯ ಮಾಡಿದರು. ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವ ಪ್ರಯೋಗ ನಡೆಯಿತು. ಜಗತ್ತಿನ ಎಲ್ಲ ಜ್ಞಾನ ಮತ್ತು ಎಲ್ಲ ವಿದ್ವಾಂಸರ ಪುಸ್ತಕಗಳನ್ನು ಕನ್ನಡದಲ್ಲೇ ದೊರೆಯಬೇಕೆಂದು ಕರ್ತವ್ಯ ನಿರ್ವಹಿಸಿದರು ಎಂದು ಹೇಳಿದರು.
ಶಿಕ್ಷಣ ಮತ್ತು ವೈದ್ಯ ಶಿಕ್ಷಣ ದುಬಾರಿಯಾಗಿರುವುದು ಪ್ರಜಾಪ್ರಭುತ್ವದ ಅಧಃಪತನದ ಸಂಕೇತ. ತೆರಿಗೆಯ ಹಣ ಶಿಕ್ಷಣ, ಆರೋಗ್ಯ, ಆಹಾರಕ್ಕೆ ವಿನಿಯೋಗವಾಗಬೇಕು. ಓದುಗರಿಗೆ ಪುಸ್ತಕ ಕಳುಹಿಸಲು ಹೆಚ್ಚು ತೆರಿಗೆ ಹಾಕಿರುವುದು ಜ್ಞಾನ ವಿರೋಧಿ ಕೃತ್ಯ ಎಂದರು.
1916ರ ಮೈಸೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶ್ವವಿದ್ಯಾಲಯಕ್ಕೆ ಬಾರದವರಿಗೆ ಜ್ಞಾನ ಮುಟ್ಟಿಸಲು ಏನಾದರೂ ಮಾಡುವಂತೆ ಕರೆ ಕೊಡುತ್ತಾರೆ. ಅನಂತರ ಹಳ್ಳಿಗಳಿಗೆ ಪ್ರಾಧ್ಯಾಪಕರು ತೆರಳಿ ಖಗೋಳ, ನಕ್ಷತ್ರ, ಭೂಗೋಳ, ತ್ರಿಪದಿ, ಪಂಪನ ಮೇಲೆ ಉಪನ್ಯಾಸ ಕೊಡುತ್ತಾರೆ. ಈ ಮಾದರಿ ಜಗತ್ತಿನಲ್ಲೇ ಮೈಸೂರಿನ ಪ್ರಯೋಗ ಎಂದು ಪ್ರಖ್ಯಾತವಾಗುತ್ತದೆ.
ಪ್ರಸಾರಾಂಗ ಜ್ಞಾನ, ವಿಚಾರ ಪ್ರಸರಣದಲ್ಲಿ ದೊಡ್ಡ ಕೆಲಸ ಮಾಡಿದೆ. ಚಳವಳಿಯಾಗಿ ಜನರಿಗೆ ತಿಳಿವಳಿಕೆ ಕೊಟ್ಟ ಭವ್ಯ ಪರಂಪರೆ ಹೊಂದಿದೆ ಎಂದು ಹೇಳಿದರು. ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು, ಅಧೀಕ್ಷಕ ಚನ್ನಪ್ಪ, ಮುದ್ರಾಣಾಲಯದ ನಿರ್ದೇಶಕ ಸತೀಶ್, ವಿಜಯಮ್ಮ, ಲಲಿತಾ, ರೇಣುಕಾ ಇದ್ದರು.