ಜಿಲ್ಲೆ

ಹೊಸ ಡಿಸಿ ಭವನ ನಿರ್ಮಾಣ ಸನ್ನಿಹಿತ

ಮಂಜುನಾಥ ಅಂಗಡಿ ಧಾರವಾಡ
ನಗರದಲ್ಲಿ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸೇರಿ ಹತ್ತಾರು ಪಾರಂಪರಿಕ ಕಟ್ಟಡಗಳಿವೆ. ಜಿಲ್ಲಾಧಿಕಾರಿ ಕಚೇರಿ ಕೂಡ ಈ ಸಾಲಿಗೆ ಸೇರುತ್ತದೆ. ಬ್ರಿಟಿಷರ ಕಾಲದಿಂದಲೂ ಇದು ಜಿಲ್ಲಾ ಆಡಳಿತದ ಹೆಡ್​ಕ್ವಾರ್ಟರ್ ಆಗಿದೆ. ಅದರೊಂದಿಗೆ ಮತ್ತೊಂದು ನೂತನ ಜಿಲ್ಲಾಡಳಿತ ಭವನ ಸ್ಥಾಪನೆ ಸನ್ನಿಹಿತವಾಗಿದೆ.
ಕರ್ನಾಟಕ ಕಾಲೇಜು, ಮಾಳಮಡ್ಡಿ, ಕೋರ್ಟ್, ಡಯಟ್​ನಂಥ ಪ್ರಮುಖ ಸ್ಥಳಗಳ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಇದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬ್ರಿಟಿಷ್ ಕಾಲದಲ್ಲೇ ನಗರದ ಹೃದಯಭಾಗದಲ್ಲಿ ನಿರ್ವಣಗೊಂಡು ಕಾರ್ಯನಿರ್ವಹಿಸುತ್ತಿದೆ. ಹಲವು ವರ್ಷಗಳಿಂದ ನೂತನ ಜಿಲ್ಲಾಡಳಿತ ಭವನ ನಿರ್ವಣದ ಕೂಗು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ವಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಜಿಲ್ಲಾಡಳಿತದ ಆವರಣ ‘ಡಿಸಿ ಕಾಂಪೌಂಡ್’ ಎಂದೇ ಚಿರಪರಿಚಿತ. ಸುಮಾರು 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ, ನಿವಾಸ, ಉಪ ವಿಭಾಗಾಧಿಕಾರಿ ಕಚೇರಿ, ಜಿ.ಪಂ., ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ, ರ್ಸಟ್ ಹೌಸ್, ಸಮಾಜ ಕಲ್ಯಾಣ, ಆಹಾರ ಇಲಾಖೆ ಕಚೇರಿಗಳು, ಸ್ವಿಮ್ಮಿಂಗ್​ಫೂಲ್, ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗಳಿವೆ. ಈಗಿನ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಕಚೇರಿ, ಕಂದಾಯ, ಮುಜರಾಯಿ ಮತ್ತು ನ್ಯಾಯಾಂಗ ಶಾಖೆ, ಚುನಾವಣೆ ಮತ್ತು ಜನಗಣತಿ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಡಿಯೋ ಕಾನ್ಪರೆನ್ಸ್ ಭವನಗಳಿವೆ. ಇನ್ನುಳಿದ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳು ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಒಂದೇ ಸೂರಿನಡಿ ಹಲವು ಇಲಾಖೆಗಳು ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತ ಭವನ ನಿರ್ವಣಕ್ಕೆ ಬೇಡಿಕೆ ಇತ್ತು.
ಹಿಂದಿನ ಇಬ್ಬರು ಜಿಲ್ಲಾಧಿಕಾರಿಗಳ ಆಡಳಿತಾವಧಿಯಲ್ಲೂ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಜಿಲ್ಲಾಧಿಕಾರಿ ನಿವಾಸದ ಎದುರಿನ ಮಿನಿ ವಿಧಾನಸೌಧ ಪಕ್ಕದಲ್ಲಿ ಹತ್ತಾರು ಎಕರೆ ನೀಲಗಿರಿ ತೋಪು ಬೆಳೆಸಲಾಗಿದ್ದು, ಅಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ವಣಕ್ಕಾಗಿ ಜಾಗ ಗುರುತಿಸಲಾಗಿತ್ತು. ಆದರೆ, ಯೋಜನೆ ಕೈಗೂಡಿರಲಿಲ್ಲ. ಇತ್ತೀಚೆಗೆ ಅಂದಾಜು 100 ಕೋಟಿ ರೂ. ವೆಚ್ಚದ ಯೋಜನೆಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.


ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ ಇಲ್ಲ: ಕರ್ನಾಟಕ ಕಾಲೇಜು ರಸ್ತೆಯ ಎಸ್​ಬಿಐ ಮುಖ್ಯ ಕಚೇರಿ ಪಕ್ಕದಲ್ಲಿದ್ದ ‘ವಿದ್ಯಾಸೌಧ’ ಕಟ್ಟಡ ಈಗ ಪಳಿಯುಳಿಕೆಯಂತಾಗಿದೆ. ಅದನ್ನು ನೆಲಸಮ ಮಾಡಿ ಹಿಂದಿನ ಖಾಲಿ ಜಾಗವನ್ನೂ ಬಳಸಿಕೊಂಡು ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ವಿುಸಲು ಯೋಜಿಸಲಾಗಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿಯನ್ನು ಪಾರಂಪರಿಕ ಕಟ್ಟಡದಲ್ಲೇ ಉಳಿಸುವ ಯೋಜನೆ ಇದೆ.
ಪ್ರತಿಭಟನೆಗೆ ಸ್ಥಳ ಮೀಸಲು: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿದಿನ ಒಂದೆರಡು ಪ್ರತಿಭಟನೆಗಳು ಸಾಮಾನ್ಯ. ಕೆಲವೊಮ್ಮೆ ವಾರಗಟ್ಟಲೇ ಅನಿರ್ದಿಷ್ಟಾವಧಿ ಮುಷ್ಕರ, ಅಹೋರಾತ್ರಿ ಧರಣಿ ನಡೆಯುತ್ತವೆ. ಮಳೆ- ಬಿಸಿಲನ್ನು ಲೆಕ್ಕಿಸದ ಪ್ರತಿಭಟನಾಕಾರರಿಗೆ ಪ್ರತ್ಯೇಕ ಸ್ಥಳ ಮೀಸಲಿಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಯೋಜಿಸಿದ್ದಾರೆ. ಜಲಮಂಡಳಿಯ ಪಕ್ಕದಲ್ಲಿ ಕಾವೇರಿ ಹಾಸ್ಟೆಲ್ ಮೂಲಕ ಕೆಸಿಡಿಗೆ ಹೋಗುತ್ತಿದ್ದ ರಸ್ತೆಯನ್ನು ಪ್ರತಿಭಟನಾ ಸ್ಥಳಕ್ಕಾಗಿ ಗುರುತಿಸಲಾಗಿದೆ. ಅಲ್ಲಿ ವಿಶಾಲವಾದ ಶೆಡ್ ನಿರ್ವಿುಸಿ ಅನುಕೂಲ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನದ ನೂತನ ಕಚೇರಿ ನಿರ್ವಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸರ್ಕಾರ ಒಪ್ಪಿದರೆ ಮಿನಿ ವಿಧಾನಸೌಧ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸುಸಜ್ಜಿತ ಕಟ್ಟಡ ತಲೆ ಎತ್ತಲಿದೆ. ಇದರಿಂದ ಸಾರ್ವಜನಿಕರ ಓಡಾಟ ತಪ್ಪಲಿದೆ.| ಗುರುದತ್ತ ಹೆಗಡೆ ಜಿಲ್ಲಾಧಿಕಾರಿ ಧಾರವಾಡ