ಚಿತ್ರದುರ್ಗ: ನಗರದಲ್ಲಿ ಹೊಸ ಜಿಲ್ಲಾ ನ್ಯಾಯಾಲಯ ಕಟ್ಟಡ ಸಂಕೀರ್ಣ ನಿರ್ಮಾಣಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಐಯುಡಿಪಿ ಲೇಔಟ್ ಬಳಿ ಐದು ಎಕರೆ ವಿಸ್ತೀರ್ಣದಲ್ಲಿ, ಅಂದಾಜು 72 ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಅನುದಾನ ಬಿಡುಗಡೆ ಆಗುತ್ತಿದ್ದಂತೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.
2854 ಪ್ರಕರಣಗಳು ಇತ್ಯರ್ಥ
ಜಿಲ್ಲಾ ನ್ಯಾಯಾಲಯ ಸೇರಿ ಜಿಲ್ಲೆಯ 23 ಕೋರ್ಟ್‌ಗಳಲ್ಲಿ ಜು.8 ರಂದು ನಡೆದಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 2854 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ಅಂದು ನಡೆದ ಅದಾಲತ್‌ನಲ್ಲಿ 5525 ಪ್ರಕರಣಗಳ ಇತ್ಯರ್ಥದ ಗುರಿ ಇದ್ದು, ಉತ್ತಮ ಪ್ರಗತಿ ಆಗಿದೆ. ಇದನ್ನು ಗಮನಿಸಿದರೆ ಸಾರ್ವಜನಿಕರಲ್ಲಿ ಆದಾಲತ್ ಕುರಿತಂತೆ ವಿಶ್ವಾಸ ಹೆಚ್ಚಾಗುತ್ತದೆ.
ಅದರಲ್ಲಿ ವಿಶೇಷವಾಗಿ 74 ಪಾಲು ವಿಭಾಗ, 322 ಚೆಕ್‌ಬೌನ್ಸ್, 122 ಕ್ರಿಮಿನಲ್ ಕಾಂಪೌಂಡ್, 133 ಅಪಘಾತ ವಿಮಾ ಪ್ರಕರಣಗಳು, 73 ಕೌಟುಂಬಿಕ, 188 ಅಮಲ್ ಜಾರಿ, 322 ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, 24 ಕರಾರಿಗೆ ಸಂಬಂಧಿಸಿದ ಹಾಗೂ 166 ವಿವಿಧ ರೀತಿಯ ಸಿವಿಲ್ ದಾವೆಗಳು ಇತ್ಯಾದಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿದ್ದ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಇತ್ಯರ್ಥವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿದ್ದ 29 ವರ್ಷ ಹಳೆಯ ವ್ಯಾಜ್ಯಕ್ಕೆ ತಾರ್ಕಿಕ ಅಂತ್ಯ ದೊರಕಿದೆ. ಹಿರಿಯೂರು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಒಂದು ವರ್ಷದಿಂದ ಇದ್ದ 5.06 ಕೋಟಿ ರೂ. ಭೂ ಸ್ವಾಧೀನ ಪರಿಹಾರ ಪ್ರಕರಣವೂ ಇತ್ಯರ್ಥವಾಗಿದೆ. ಒಂದೇ ಕುಟುಂಬದ ಸದಸ್ಯರ ನಡುವಿನ ವ್ಯಾಜ್ಯದಿಂದಾಗಿ ರಾ.ಹೆ.ಪ್ರಾಧಿಕಾರ ಭೂಸ್ವಾಧೀನದ ಪರಿಹಾರದ ಹಣ ಕೋರ್ಟ್‌ನಲ್ಲಿತ್ತು. 13 ವರ್ಷಗಳಿಂದ ದೂರವಿದ್ದ ದಂಪತಿ ಹೊಸದುರ್ಗದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ರಾಜಿ ಆಗಿದ್ದಾರೆ.
ಕೋರ್ಟ್‌ಗಳೂ ಸೇರಿ ನಗರ, ಪಟ್ಟಣಗಳಲ್ಲಿ ನನ್ನ ಗಮನಕ್ಕೆ ಬಂದಂಥ ಮೂಲ ಸೌಕರ್ಯ ಕೊರತೆ, ಸಮಸ್ಯೆಗಳೆಡೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು.
ಅದಾಲತ್‌ನಲ್ಲಿ ಸಹಕರಿಸಿದೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ನ್ಯಾಯಾಧೀಶರು, ಸೆಪ್ಟೆಂಬರ್ 9 ರಂದು ನಡೆಯಲಿರುವ ಅದಾಲತ್‌ನಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳುವಂತೆ ಕಕ್ಷಿದಾರರರಲ್ಲಿ ವಿನಂತಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು, ಪ್ರಾಧಿಕಾರದ ಕಾರ‌್ಯದರ್ಶಿ ಎಂ.ವಿಜಯ್ ಇದ್ದರು.