ಜಿಲ್ಲೆ

ಹೊಸ ಕೊಳವೆಬಾವಿ ಕೊನೇ ಆಯ್ಕೆಯಾಗಿರಲಿ

ಚಿತ್ರದುರ್ಗ: ತೀವ್ರ ಸಮಸ್ಯೆ ತಲೆದೋರಿರುವ ಗ್ರಾಮಗಳಿಗೆ ಕೂಡಲೇ ಕುಡಿಯುವ ನೀರು ಪೂರೈಸುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಗ್ರಾಪಂ ಪಿಡಿಒಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಮಳೆ ಕೊರತೆ, ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳ 56 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಪೈಕಿ 27 ಗ್ರಾಮಗಳಲ್ಲಿ ಸಮಸ್ಯೆ ತೀವ್ರವಾಗಿದ್ದು, 33 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದರು.
24 ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದ್ದು, ಪೂರೈಸುವ ನೀರಿನ ಗುಣಮಟ್ಟದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ನೀರಿನ ಸಮಸ್ಯೆ ತೀವ್ರವಿರುವ ಕಡೆಗಳಲ್ಲಿರುವ ಬೋರ್‌ವೆಲ್‌ಗಳ ಪುನಶ್ಚೇತನಕ್ಕೆ ಮುಂದಾಗಬೇಕು. ಖಾಸಗಿ ಬೋರ್‌ವೆಲ್‌ಗಳು ಬಾಡಿಗೆಗೆ ಸಿಗದಿದ್ದರೆ ತಕ್ಷಣಕ್ಕೆ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು. ಹೊಸ ಬೋರ್‌ವೆಲ್ ಕೊರೆಸುವುದು ಕೊನೆ ಆಯ್ಕೆಯಾಗಬೇಕು ಎಂದರು.
ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಜಿಪಂ ಮತ್ತು ತಾಪಂ ಕಚೇರಿಗಳಲ್ಲಿ 24/7 ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಉದಾಸೀನತೆ ತೋರಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಮೇಟಿ ಪಾಟೀಲ್ ಮತ್ತಿತರರು ಇದ್ದರು.

*ಸಹಾಯವಾಣಿ
ಜಿಪಂ ಕಚೇರಿ-08194-200040
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ-08194-200041.
ಚಿತ್ರದುರ್ಗ-08194-230232
ಚಳ್ಳಕೆರೆ-8792228043
ಹಿರಿಯೂರು-9480861112
ಹೊಳಲ್ಕೆರೆ-9538812986
ಹೊಸದುರ್ಗ-08199-295024
ಮೊಳಕಾಲ್ಮೂರು-08198-229122