ಚಿತ್ರದುರ್ಗ: ಹೊಸ ಕಾನೂನುಗಳ ಜಾರಿ, ಹಿಂದಿನ ಕಾನೂನುಗಳಲ್ಲಿ ಆಗಿರುವ ಮಾರ್ಪಾಡು ಅರಿತು ಅತ್ಯಂತ ನಿಖರವಾಗಿ ಅವುಗಳನ್ನು ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್‌ವಾಸುದೇವ ಹೇಳಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ ನ್ಯಾಯ, ಪೋಕ್ಸೊ ಕಾಯ್ದೆಗಳು ಹಾಗೂ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಕುರಿತು ಅಧಿಕಾರಿಗಳಿಗೆ ನಗರದ ಡಯಟ್‌ನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೊಸ ಹೊಸ ಕಾನೂನು ಕುರಿತು ತಿಳಿವಳಿಕೆಗೆ ಇಂಥ ತರಬೇತಿಗಳು ಅಗತ್ಯ. ಈಚಿನ ದಿನಗಳಲ್ಲಿ ಪ್ರತಿ ಮಗುವಿಗೂ ಮೊಬೈಲ್, ಇಂಟರ್‌ನೆಟ್ ದೊರೆಯುತ್ತಿದೆ. ಮಕ್ಕಳು ಸಾಮಾಜಿಕ ತಾಣಗಳನ್ನು ಬಳಸುತ್ತಿದ್ದಾರೆ. ಇದರಿಂದ ಅವರ ಮಾನಸಿಕ ಬೆಳವಣಿಗೆ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿದೆ. ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾಗುತ್ತಿದ್ದಾರೆ. ಅವರ ಬೆಳವಣಿಗೆ, ನಡೆ, ನುಡಿಯಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡು ಬರುತ್ತಿದೆ. ಈ ಎಲ್ಲವನ್ನೂ ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲೆ ಹೆಚ್ಚಾಗಿದೆ ಎಂದರು.
ಎಸ್.ಪಿ. ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಬಾಲ ನ್ಯಾಯ ಕಾಯ್ದೆಯಲ್ಲಿ ಮಕ್ಕಳನ್ನು ಆರೋಪಿ ಎಂದೂ ಕರೆಯಲಾಗದು. ಇದು ಕಾನೂನಿನ ಸಂವೇದನಾಶೀಲತೆ ತಿಳಿಸುತ್ತದೆ. ಇವು ಮಕ್ಕಳ ಹಕ್ಕುಗಳ ರಕ್ಷಣೆ ಉದ್ದೇಶದಿಂದ ಮಾಡಿರುವ ಕಾನೂನುಗಳಾಗಿವೆ ಎಂದರು.
ಬಾಲ ನ್ಯಾಯ ಕಾಯ್ದೆಯಲ್ಲಿ ಬಹಳಷ್ಟು ಕಾರ್ಯವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಈ ವೇಳೆ ಕೆಲವು ಲೋಪ-ದೋಷಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯಾವುದೇ ತಪ್ಪುಗಳು ಆಗಬಾರದು ಎಂಬ ಉದ್ದೇಶದಿಂದ ತರಬೇತಿ ಏರ್ಪಡಿಸಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ, ಉಜ್ವಲಾ ವೀರಣ್ಣ ಸಿದ್ದಣ್ಣವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ. ಶೀಲಾ, ಡಯಟ್ ಪ್ರಾಚಾರ್ಯ ಎಂ. ನಾಸಿರುದ್ದೀನ್, ಬೆಂಗಳೂರಿನ ಎಸ್‌ಜೆಪಿಯು-ಸಿಐಡಿ ಪೊಲೀಸ್ ತರಬೇತುದಾರ ಸಿ.ಜಿ. ರೋಹಿತ, ಡಿವೈಎಸ್‌ಪಿ ಪಿ.ಕೆ. ದಿನಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತಾ ಇದ್ದರು.