ಜಿಲ್ಲೆ

ಹೊಸ ಕಲಾವಿದರಿಗೂ ಪ್ರೋತ್ಸಾಹ ನೀಡಿ

ಚಿತ್ರದುರ್ಗ: ನಮಗೆ ಪ್ರೋತ್ಸಾಹಿಸಿದಂತೆ ಸಿನಿರಂಗ ಪ್ರವೇಶಿಸುತ್ತಿರುವ ಹೊಸ ಕಲಾವಿದರ ಚಿತ್ರಗಳನ್ನು ವೀಕ್ಷಿಸುವ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕರಿಸಿ ಎಂದು ನಟ ಶಿವರಾಜ್‌ಕುಮಾರ್ ಕನ್ನಡಾಭಿಮಾನಿಗಳಲ್ಲಿ ಮನವಿ ಮಾಡಿದರು.

ಯಶಸ್ವಿ ಪ್ರದರ್ಶನ ಕಾಣುತ್ತಿರುವ ಭೈರತಿ ರಣಗಲ್ ಚಿತ್ರದ ಪ್ರಚಾರ ಸಂಬಂಧ ನಗರದ ಪ್ರಸನ್ನ ಚಿತ್ರಮಂದಿರಕ್ಕೆ ಶನಿವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದರು.

ಕಳೆದ ಮೂರ‌್ನಾಲ್ಕು ದಶಕಗಳಿಂದಲೂ ನನಗೆ ಅಭಿಮಾನಿಗಳು ಉತ್ತಮ ಸಹಕಾರ ನೀಡುತ್ತ ಬಂದಿದ್ದೀರಿ. ಇತ್ತೀಚೆಗೆ ಥಿಯೇಟರ್‌ಗಳಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕುಸಿದಿತ್ತು. ಆದರೆ, ಪುನಾ ಚೇತರಿಕೆ ಕಾಣಲಾರಂಭಿಸಿದೆ. ಅತ್ಯುತ್ತಮ ಚಿತ್ರಗಳು ತೆರೆ ಕಂಡರೆ, ಪ್ರೇಕ್ಷಕರು ಎಂದಿಗೂ ಕೈಬಿಡಲಾರರು ಎಂಬುದಕ್ಕೆ ನಿದರ್ಶನವಾಗಿದೆ ಎಂದರು.

ಅಪ್ಪು ಎಲ್ಲೂ ಹೋಗಿಲ್ಲ. ಅವನ ಕಣ್ಣುಗಳು ಜಗತ್ತನ್ನು ನೋಡುತ್ತಿವೆ. ನಮ್ಮೆಲ್ಲರಲ್ಲೂ ಇದ್ದು, ನೆನಸಿಕೊಳ್ಳದ ದಿನಗಳಿಲ್ಲ. ಕನ್ನಡಿಗರ ಮನೆ-ಮನದಲ್ಲಿ ನೆಲೆಸಿದ್ದಾನೆ ಎಂದು ಹೇಳಿದರು.

ಚಿತ್ರರಂಗ ನಂಬಿ ಸಾವಿರಾರು ಕುಟುಂಬಗಳು ಜೀವಿಸುತ್ತಿವೆ. ಭೈರತಿ ರಣಗಲ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಕಥೆಯೂ ನೋಡುಗರಲ್ಲಿ ಕುತೂಹಲ ಹೆಚ್ಚಿಸುತ್ತ್ತದೆ. ಅಲ್ಲದೆ ಮುಂದಿನ ದಿನದಲ್ಲಿ ‘ಭಾಗ 2’ ಚಿತ್ರೀಕರಿಸಿ, ತೆರೆ ಕಾಣುವ ನಿರೀಕ್ಷೆ ಇದೆ ಎಂದರು.

ನಾನೂ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಚಿತ್ರ ತೆರೆ ಕಾಣಲಿದೆ. ಇದರಲ್ಲಿ ನನ್ನ ಪಾತ್ರ ಭಿನ್ನವಾಗಿದೆ. ಇದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ. ನಂತರ ನಮ್ಮದೇ ಬ್ಯಾನರ್‌ನಲ್ಲಿ ಎ ಫಾರ್ ಆನಂದ್ ಸಿನಿಮಾ ಮೂಡಿಬರಲಿದೆ. ಇದು ನನ್ನ ಹಾಗೂ ಮಕ್ಕಳ ನಡುವಿನ ವಿಭಿನ್ನ ಶೈಲಿಯ ಚಿತ್ರವಾಗಿದ್ದು, ಹೊಸತನ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ನ. 24ರಂದು ದಾವಣಗೆರೆ, ಶಿರಸಿ, ಶಿವಮೊಗ್ಗ, ರಾಣೆಬೆನ್ನೂರು ಹಾಗೂ ಹುಬ್ಬಳ್ಳಿಗೆ ಪ್ರವಾಸ ಕೈಗೊಂಡು ಪ್ರಚಾರ ಮಾಡಲಿದ್ದೇವೆ ಎಂದರು. ಶಿವಣ್ಣ ಚಿತ್ರಮಂದಿರ ಪ್ರವೇಶಿಸುತ್ತಿದ್ದಂತೆ ನೂರಾರು ಅಭಿಮಾನಿಗಳು ಶಿಳ್ಳೆ, ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಕೆಲವರು ಬೃಹತ್ ಹೂವಿನಹಾರ ಹಾಕಿ ಸ್ವಾಗತಿಸಿದರು. ಸೆಲ್ಫಿ ಗಾಗಿ ಮುಗಿಬಿದ್ದರು.

ಪತ್ನಿ ಗೀತಾ ಶಿವರಾಜ್‌ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಚಿತ್ರಮಂದಿರದ ಮಾಲೀಕ ಪ್ರಜ್ವಲ್, ಟಿಪ್ಪು ಖಾಸಿಂ ಆಲಿ ಇತರರಿದ್ದರು.