ಜಿಲ್ಲೆ

ಹೊಸ ಒಳನೋಟ ತೆರೆದಿಟ್ಟ ತಾಳಮದ್ದಲೆ ಕನಕ ಜಾನಕಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಾಕಾವ್ಯ ರಾಮಾಯಣದ ಕೇಂದ್ರ ಬಿಂದು ಸೀತೆ ಒಂದೆಡೆ ಆದರ್ಶದ ಪ್ರತಿರೂಪವಾಗಿದ್ದರೆ, ಇನ್ನೊಂದೆಡೆ ಸಾಮಾನ್ಯ ಮಹಿಳೆಯಾಗಿ ಆಕೆಯ ಭಾವನೆ, ತಲ್ಲಣಗಳೇನು ಎನ್ನುವ ಕಥಾವಸ್ತು ಹೊಂದಿದ ಏಕವ್ಯಕ್ತಿ ತಾಳ ಮದ್ದಲೆ ಕನಕ ಜಾನಕಿ ತನ್ನ ಹೊಸ ಒಳನೋಟ, ವಿಭಿನ್ನ ವಾಖ್ಯಾನದ ಮೂಲಕ ಚಿಂತನೆಗೆ ಹಚ್ಚಿತು.
ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಇಲ್ಲಿನ ಸರಸ್ವತಿ ಸಂಗೀತ ವಿದ್ಯಾಲಯ ಶನಿವಾರ ಏರ್ಪಡಿಸಿದ್ದ, ದಿವಾಕರ ಹೆಗಡೆ ಪ್ರಸ್ತುತಪಡಿಸಿದ ಈ ಏಕವ್ಯಕ್ತಿ ತಾಳಮದ್ದಳೆ ಕಾವ್ಯಾತ್ಮಕ ಭಾಷೆ, ಹೊಸ ಆಲೋಚನೆಗಳು, ಸುಶ್ರಾವ್ಯ ಹಾಡುಗಾರಿಕೆ ಹಾಗೂ ಉತ್ತಮ ಸಂಯೋಜನೆಯೊಂದಿಗೆ ಪ್ರಸ್ತುತಗೊಂಡು ಹೊಸ ಅನುಭವ ನೀಡಿತು.
ಯಕ್ಷಗಾನ ಕವಿಯ ಪಠ್ಯವನ್ನಾಧರಿಸಿ ಕಟ್ಟುವ ಆಶು ನಾಟಕ ತಾಳಮದ್ದಲೆ, ಪುರಾಣದ ಆಖ್ಯಾನವೊಂದರಲ್ಲಿ ಬರುವ ಎಲ್ಲ ಪಾತ್ರಗಳನ್ನು ಒಬ್ಬರೇ ನಿರ್ವಹಿಸುವ ಅಥವಾ ಒಂದೇ ಪಾತ್ರದ ಮಾತಿನಲ್ಲಿ ಇಡೀ ಕಥೆ ಕಟ್ಟಿಕೊಡುವ ವಿಶಿಷ್ಟ ಕಲಾಪ್ರಕಾರವಿದು.
ರಾಮಾಯಣದಲ್ಲಿ ಸೀತೆಯ ಎದುರು ಬಂಗಾರ ಬಂದಾಗಲೆಲ್ಲ ಅವಳ ಯೋಚನಾ ಲಹರಿ, ಅನುಭವಿಸುವ ತಲ್ಲಣಗಳು, ನಿರಾಸೆ, ಸಿಟ್ಟು, ಅಸಹಾಯಕತೆ ಹೀಗೆ ಹಲವು ಆಯಾಮಗಳಲ್ಲಿ ಅದು ಕೇವಲ ಸೀತೆಯೊಬ್ಬಳ ಸ್ವಗತವಾಗುವುದಿಲ್ಲ. ಪ್ರತಿ ಹೆಣ್ಣಿನ ಮನದ ತುಡಿತವಾಗಿ ನಮ್ಮೆದುರು ನಿಲ್ಲುತ್ತದೆ. ಸುಮಾರು 2 ಗಂಟೆಗಳ ಕಾಲ ನಡೆದ ಈ ಕನಕ ಜಾನಕಿ ಆಖ್ಯಾನ, ಹೊಸ ಕಲಾ ಪ್ರಕಾರ ಧಾರವಾಡಿಗರಿಗೆ ವಿಶಿಷ್ಟ ಅನುಭವ ನೀಡಿತು.
ರಂಗಭೂಮಿ, ನಾಟಕ ರಚನೆ, ಸಾಹಿತ್ಯ ಹೀಗೆ ವಿಭಿನ್ನ ಕ್ರಿಯಾಶೀಲ ಆಯಾಮಗಳಲ್ಲಿ ತೊಡಗಿರುವ, ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ದಿವಾಕರ ಹೆಗಡೆ ಏಕವ್ಯಕ್ತಿ ತಾಳಮದ್ದಲೆ ನಡೆಸಿಕೊಟ್ಟರು. ಇವರಿಗೆ ಹಾಡುಗಾರಿಕೆಯಲ್ಲಿ ಅನಂತ ಹೆಗಡೆ ದಂತಳಿಗೆ, ಮದ್ದಳೆಯಲ್ಲಿ ಯಲ್ಲಾಪುರ ತಾಲೂಕಿನ ಹಂಡ್ರಮನೆಯ ನರಸಿಂಹ ಭಟ್ ಜತೆಯಾಗಿದ್ದರು.
ಉದಯ ದೇಸಾಯಿ, ಪಂ.ಶ್ರೀಪಾದ ಹೆಗಡೆ, ಚೇತನಕುಮಾರ ದೇಸಾಯಿ, ಜಿ.ಸಿ.ತಲ್ಲೂರ, ರವಿ ಕುಲಕರ್ಣಿ, ಇತರರು ಇದ್ದರು.