ಜಿಲ್ಲೆ

ಹೊಸ ಆಲೋಚನೆಗಳಿಂದ ಮಾತ್ರ ಚಲನಶೀಲತೆ; ಡಾ.ಚಿದಾನಂದ ಎಸ್.ನಾಯಕ್

ಮೈಸೂರು: ಹೊಸ ಬಗೆಯ ಆಲೋಚನೆ ಇದ್ದಾಗ ಮಾತ್ರ ಬದುಕಿನಲ್ಲಿ ಚಲನಶೀಲತೆ ಇರುತ್ತದೆ ಎಂದು ಕ್ಯಾನ್ ಚಲನಚಿತ್ರೋತ್ಸವ ಪ್ರಶಸ್ತಿ ವಿಜೇತ ಡಾ.ಚಿದಾನಂದ ಎಸ್.ನಾಯಕ್ ಹೇಳಿದರು.

ಶತಮಾನೋತ್ಸವ ಅಂಗವಾಗಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಜೆ.ಕೆ. ಮೈದಾನದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ‘ಧಮನಿ’ ಕಾರ್ಯಕ್ರಮ ಮತ್ತು ಚಾಮಚೆಲುವೆ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.

ಪ್ರತಿ ಸಲವೂ ಹೊಸ ಹೊಸ ಆಲೋಚನೆ ಇದ್ದಾಗ ಮಾತ್ರ ಚಲನಶೀಲತೆ ಇರುತ್ತದೆ. ಒಂದೇ ತರಹ ಇದ್ದರೆ ಲವಲವಿಕೆ, ಸಂತೋಷ ಇರುವುದಿಲ್ಲ. ಮನುಷ್ಯ ಕಂಪ್ಯೂಟರ್ ಅಲ್ಲ. ಒಂದೇ ತರ ಇರಲಾಗಲ್ಲ. ಸಮಾಜದ ಬದಲಾವಣೆಗೆ ತಕ್ಕಂತೆ ಮನುಷ್ಯ ನಡೆಯಬೇಕು.

ಹೀಗಾಗಿ, ಪ್ರತಿಯೊಬ್ಬರೂ ನವೀನ ಆಲೋಚನೆಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು. ಎಂದಿಗೂ ಹೊಸತನದ ಹುಡುಕಾಟವನ್ನು ನಿಲ್ಲಿಸಬಾರದು. ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದ ಆಚೆಗೂ ಬದುಕು ಇದೆ ಎಂಬುದನ್ನು ಮರೆಯಬಾರದು. ತಮ್ಮ ವೃತ್ತಿಯೊಂದಿಗೆ ಕಲೆ, ಸಾಹಿತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಕ್ರಿಯವಾಗಬೇಕು ಎಂದರು.

ಬಳಿಕ ಸುಜಾತ ಅಕ್ಕಿ ಅವರು ರಚಿಸಿರುವ ಚಾಮಚೆಲುವೆ ನಾಟಕ ಹೃದಯರಂಗ ರಂಗ ತಂಡದ ಜೀವನ್ ಕುವಾರ್ ಬಿ.ಹೆಗ್ಗೋಡು ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

ಎಂಎಂಸಿಆರ್‌ಐ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸುಧಾ, ವಿದ್ಯಾರ್ಥಿ ಕ್ಷೇವಾಭಿವೃದ್ಧಿ ಅಧಿಕಾರಿ ಎಸ್.ಚಂದ್ರಶೇಖರ್, ಕನ್ನಡ ಸಂಘದ ಅಧ್ಯಕ್ಷೆ ಶುಭಾ ಜಯರಾಮ್, ಉಪಾಧ್ಯಕ್ಷ ಡಾ.ಆರ್.ಯೋಗೀಶ್, ಕಾರ್ಯದರ್ಶಿ ಲಿಖಿತ್ ಆರ್.ಶೇಖರ್, ನಾಟಕ ವಿನ್ಯಾಸಕ ದೀಪಕ್ ಮೈಸೂರು, ಚಿನ್ಮಯ್ ನಾಯಕ್ ಇನ್ನಿತರರಿದ್ದರು.