ಜಿಲ್ಲೆ

ಹೊಸ ಅನ್ವೇಷಣೆಯೇ ಶಿಕ್ಷಣದ ಗುರಿಯಾಗಲಿ : ಪ್ರೊ. ಎಲ್.ಎಸ್. ಶಶಿಧರ ಸಲಹೆ

ಮೈಸೂರು: ಶಿಕ್ಷಣ ಪಡೆಯುವುದರ ಹಿಂದೆ ಕೇವಲ ಪದವಿ ಪ್ರಮಾಣ ಪತ್ರ ಪಡೆಯುವ ಉದ್ದೇಶವಿರಬಾರದು. ಶಿಕ್ಷಣದಿಂದ ಹೊಸ ಅನ್ವೇಷಣೆಗಳು ಸಾಧ್ಯವಾಗಬೇಕು ಎಂದು ಟಾಟಾ ಮೂಲ ಸಂಶೋಧನಾ ಸಂಸ್ಥೆಯ ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಎಲ್.ಎಸ್. ಶಶಿಧರ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 17ನೇ ಪದವೀಧರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯಪೂರ್ವ ದೇಶದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಬೇರೆಯಿತ್ತು. ಇಂದು ಸಾಕಷ್ಟು ಬದಲಾವಣೆಯಾಗಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಿದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣದ ಅಗತ್ಯಗಳು ವಿಭಿನ್ನವಾಗಿದೆ. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಕೇವಲ ಪದವಿ ಪ್ರಮಾಣ ಪತ್ರ ಪಡೆದರೆ ಸಾಲದು. ನೀವು ಪಡೆದ ಶಿಕ್ಷಣದಿಂದ ಹೊಸ ಅನ್ವೇಷಣೆಗಳು ಸಾಧ್ಯವಾಗಬೇಕು. ಈ ಜ್ಞಾನ ಮತ್ತು ಯಶಸ್ಸಿನ ಹಿಂದೆ ದೇಶದ ಪ್ರಗತಿಯೂ ಇದೆ ಎನ್ನುವುದನ್ನು ವಿದ್ಯಾರ್ಥಿಗಳು ಸದಾ ಮನಸ್ಸಿನಲ್ಲಿ ಇಟ್ಟುಕೊಂಡಿಸಬೇಕು ಎಂದರು. ಸ್ವಾತಂತ್ರೃ ನಂತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳು ಸುಧಾರಿಸಿವೆ. ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಹೊಸ ಅನ್ವೇಷಣೆಗಳಿಂದ ಅಚ್ಚರಿಯಾಗುವಂತೆ ಬೆಳವಣಿಗೆಯನ್ನು ಸಾಧಿಸಿದೆ. ಇದೆಲ್ಲದರ ಹಿಂದೆ ಸಮಗ್ರ ರಾಷ್ಟ್ರನಿರ್ಮಾಣದ ಕನಸು ಇದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು. ವಿಜ್ಞಾನ ಮತ್ತು ಜ್ಞಾನ ಎರಡರ ಸಮತೋಲನವನ್ನು ಕಾಯ್ದುಕೊಂಡು ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಡಾ.ಎಂ.ಪ್ರಭು, ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಬಿ. ಪ್ರಭುಸ್ವಾಮಿ, ವಿಶ್ರಾಂತ ಕುಲಪತಿ ಡಾ. ಎಂ. ಮುನಿಯಮ್ಮ ಇದ್ದರು.

ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಿಂದ 903 ವಿದ್ಯಾರ್ಥಿಗಳು ಪದವೀಧರರಾದರು. ಹೆಚ್ಚು ಅಂಕ ಪಡೆದ ಒಟ್ಟು 62 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು. 17 ವಿದ್ಯಾರ್ಥಿಗಳಿಗೆ ವಿವಿಧ ದತ್ತಿ ಪುರಸ್ಕಾರ ಮಾಡಲಾಯಿತು.