ಬಾಗಲಕೋಟೆ: ಘಟಪ್ರಭಾ ನದಿಗೆ ನೀರಿನ ಹರಿವು ಹೆಚ್ಚಳಗೊಂಡಿದ್ದರಿಂದ ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಸಲ ಮುಧೋಳ ತಾಲೂಕಿನ ಮಾಚಕನೂರ ಗ್ರಾಮದ ಪ್ರಸಿದ್ಧ ಹೊಳೆಬಸವೇಶ್ವರ ದೇವಸ್ಥಾನ ಜಲದಿಗ್ಭಂಧನಕ್ಕೆ ಒಳಗಾಗಿದೆ.
ಜುಲೈ ತಿಂಗಳಲ್ಲೂ ಘಟಪ್ರಭಾ ನದಿ ಉಕ್ಕಿದ್ದರಿಂದ ಕೆಲವು ದಿನಗಳ ಕಾಲ ದೇವಾಲಯ ಜಲಾವೃತಗೊಂಡಿತ್ತು. ನೀರು ಕಡಿಮೆ ಆಯಿತು ಎನ್ನುವಷ್ಟರಲ್ಲಿ ಕಳೆದ ಮೂರು ದಿನಗಳಿಂದ ನದಿಗೆ ಹರಿದು ಬರುವ ನೀರಿನ ಪ್ರಮಾಣ ಮತ್ತೆ ಹೆಚ್ಚಳವಾಗಿದೆ. ಇದರಿಂದ ದೇವಸ್ಥಾನ ಮತ್ತೆ ಜಲಾವೃತಗೊಂಡಿದೆ.
ದೇವಸ್ಥಾನದಲ್ಲಿ ಹತ್ತು ಅಡಿಗೂ ಅಧಿಕ ಎತ್ತರದಲ್ಲಿ ನೀರು ನುಗ್ಗಿದೆ. ದೇವಾಲಯದ ಮೇಲ್ಭಾಗದ ಮಾತ್ರ ಕಾಣಿಸುತ್ತಿದೆ. ಇದರಿಂದ ಭಕ್ತರಿಗೆ ಗುಡಿಗೆ ಹೋಗಲು ಆಗಲ್ಲ. ಆದರೆ, ಶ್ರಾವಣ ಮಾಸದ ಕೊನೆ ಶುಕ್ರವಾರ ಹೆಚ್ಚಿನ ಭಕ್ತರು ಬರುವ ಕಾರಣ ನದಿಯ ದಡದಲ್ಲಿ ಮೂರ್ತಿಯನ್ನು ಇಟ್ಟು ಅರ್ಚಕರು ಪೂಜಾ ಕೈಂಕರ್ಯ ನಡೆಸಿದರು. ದಡದಲ್ಲೆ ನಿಂತು ಭಕ್ತರು ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಶುಕ್ರವಾರ ಘಟಪ್ರಭಾ ನದಿಗೆ ೨೯೬೦೬ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ಮೂರು ದಿನಗಳಿಂದ ಘಟಪ್ರಭಾ ನದಿಯ ಒಡಲಿನ ಬಾಗಲಕೋಟೆ ಜಿಲ್ಲೆಯ ಹತ್ತು ಸೇತುವೆಗಳು ಜಲಾವೃತವಾಗಿವೆ. ಒಂದು ತಿಂಗಳ ಅಂತರದಲ್ಲಿ ಇದು ಎರಡನೇ ಸಲ ಸೇತುವೆ, ದೇವಾಲಯ ಜಲಾವೃತವಾಗಿವೆ.