ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಿಜಿಪಿಎ 2.77 ಅಂಕ ಗಳಿಸುವ ಮೂಲಕ ನ್ಯಾಕ್‌ನಿಂದ ಬಿ++ಮಾನ್ಯತೆ ಪಡೆದುಕೊಂಡಿದೆ ಎಂದು ಪ್ರಾಂಶುಪಾಲ ಪ್ರೊ.ಸಿ.ಎನ್.ಹರ್ಷವರ್ಧನ್ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ನೇತೃತ್ವದ ನ್ಯಾಕ್ ತಂಡ ಭೇಟಿ ನೀಡಿ ಕಾಲೇಜಿನಲ್ಲಿ ಶೈಕಣಿಕ ಪ್ರಗತಿ, ಮೂಲಸೌಕರ್ಯ ಗುಣಮಟ್ಟ ಪರಿಗಣಿಸಿ ಕಾಲೇಜಿಗೆ ಬಿ++ ಶ್ರೇಣಿ ನೀಡಿದೆ. ಉಪಕುಲಪತಿ ರಾಜಶೇಖರ್ ಬೆಲ್ಲಂಕೊಂಡ ಅವರ ತಂಡ ಡಿ.21 ಮತ್ತು 22 ರಂದು ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಮೌಲ್ಯಮಾಪನ ಮತ್ತು ಶೈಕ್ಷಣಿಕ ಗುಣಮಟ್ಟದ ವಿಚಾರವಾಗಿ ಪರಿಶೀಲಿಸಿದ್ದರು ಎಂದು ತಿಳಿಸಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಕಾರಿಣಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ಕಾಲೇಜಿನಲ್ಲಿ 1404 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಗ್ರಾಮೀಣ ವಿದ್ಯಾರ್ಥಿನಿಯರು ಅಧಿಕ ಪ್ರಮಾಣದಲ್ಲಿದ್ದಾರೆ. ಜತೆಗೆ ಹೊರ ಜಿಲ್ಲೆಗಳಿಂದಲೂ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, ವಸತಿ ನಿಲಯಗಳಲ್ಲಿ ತಂಗಲು ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಪದವಿ ಪಡೆಯುವುದರ ಜತೆಗೆ ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡಲು ಸೌಲಭ್ಯ ಒದಗಿಸಲಾಗುವುದು ಎಂದರು.
ತಾಲೂಕಿನಲ್ಲಿ 24 ಹಾಸ್ಟೆಲ್‌ಗಳ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಪದವಿ ಅಭ್ಯಾಸ ಮಾಡುತ್ತಿರುವಾಗಲೇ ಸುಮಾರು 360 ವಿದ್ಯಾರ್ಥಿನಿಯರ ವಿವಾಹವಾಗಿದ್ದು, ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಪಾಲಕರು ಹೆಣ್ಣು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.
ಹರದನಹಳ್ಳಿ ಗ್ರಾಮದಲ್ಲಿ 40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಹಂತದಲ್ಲಿದೆ. ವಸತಿ ನಿಲಯಗಳ ಸೌಲಭ್ಯವೂ ಇದ್ದು, ಮುಂದಿನ ವರ್ಷ ಕಾಲೇಜು ಕಾರ್ಯ ಆರಂಭವಾಗಲಿದೆ ಎಂದರಲ್ಲದೆ, ಇದೇ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಚ್.ಡಿ.ರೇವಣ್ಣ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಸಂಚಾಲಕರು ಬೋಧಕ-ಬೋಧಕೇತರ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಿದರು.
ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಮಾತನಾಡಿದರು. ಮಾಜಿ ಪುರಸಭಾ ಅಧ್ಯಕ್ಷ ಸುದರ್ಶನ್, ಸಿಡಿಸಿ ಸದಸ್ಯರಾದ ಹೆಚ್ವಿ ಸುರೇಶ್ ಕುಮಾರ್, ನಿವೃತ್ತ ಪ್ರಾಂಶುಪಾಲ ಪುಟ್ಟ ಸೋಮಪ್ಪ, ನಿವೃತ್ತ ಉಪನ್ಯಾಸಕ ಜವರೇಗೌಡ, ನಿವೃತ್ತ ಶಿಕ್ಷಕ ಚನ್ನೇಗೌಡ ಇದ್ದರು.