ಹಾಸನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ನೆಚ್ಚಿನ ಯುವ ನಾಯಕ ಶ್ರೇಯಸ್ ಎಂ.ಪಟೇಲ್ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಧನ್ಯವಾದ ಹೇಳುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ತಿಳಿಸಿದರು.
ಹೊಳೆನರಸೀಪುರ ಪಟ್ಟಣ, ಕಸಬಾ ಮತ್ತು ಹಳೇಕೋಟೆ ಹೋಬಳಿಯಲ್ಲಿ 17 ಸಾವಿರಕ್ಕೂ ಅಧಿಕ ಲೀಡ್ ಕೊಡಿಸಿದ್ದೇವೆ. ಎಲ್ಲಾ ಮತದಾರರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಬೆಂಬಲ ನೀಡಿದ್ದಾರೆ. ಅವರಿಗೆಲ್ಲಾ ಕೃತಜ್ಞತೆ ಸಲ್ಲಿಸಿದರು. ಹಿಂದೆ ಶ್ರೇಯಸ್ ಪಟೇಲ್ ಅವರ ತಾತ ಪುಟ್ಟಸ್ವಾಮಿಗೌಡರು ಸಂಸದರಾಗಿ, ಅದಕ್ಕೂ ಮುನ್ನ ಸಚಿವರಾಗಿ ಆರೋಗ್ಯ ಮತ್ತು ನೀರಾವರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಆಗಿನ ಸಾಧನೆ ಈಗ ಶ್ರೇಯಸ್ ಅವರಿಗೆ ಮತಗಳಾಗಿ ವರದಾನ ಆಗಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶ್ರೇಯಸ್ ಹಾಗೂ ಅವರ ತಾಯಿ ಅನುಪಮಾ ಅವರು, ಅಧಿಕಾರ ಇಲ್ಲದಿದ್ದಾಗಲೂ ಕ್ಷೇತ್ರದ ಜನ ಸಾಮಾನ್ಯರ ನೋವು, ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅದಕ್ಕಾಗಿ ಮತದಾರರು ಈ ಬಾರಿ ಈ ಕುಟುಂಬದ ಕೈ ಹಿಡಿದಿದ್ದಾರೆ. ಕ್ಷೇತ್ರ ಹಾಗೂ ಮತ ಹಾಕಿದ ಜನರ ಋಣ ತೀರಿಸಲು ನಮ್ಮ ಸಂಸದರು ಕೆಲಸ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೊಳೆನರಸೀಪುರದ ಜನರು ಹಾಗೂ ಅಧಿಕಾರಿಗಳಿಗೆ ಉಸಿರು ಕಟ್ಟುವ ವಾತಾವರಣ ಇತ್ತು. ಈಗ ಸ್ವತಂತ್ರ ಸಿಕ್ಕಿದೆ. ಏನೇ ಸಮಸ್ಯೆ ಇದ್ದರೂ, ಯಾವುದೇ ಆಗಲಿ ಹೆದರದೆ ಮುಕ್ತವಾಗಿ ಹೇಳಿಕೊಂಡರೆ ನಮ್ಮ ಸಂಸದರು ಸ್ಪಂದಿಸಲಿದ್ದಾರೆ ಎಂದು ಹೇಳಿದರು.
ಇದೇ ವೇಳೆ ನಮ್ಮ ಗೆಲುವಿಗೆ ಪೆನ್ ಡ್ರೈವ್ ಹಗರಣ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಮುಖಂಡರಾದ ಬೈರಶೆಟ್ಟಿ, ದೇವರಾಜು, ಸುರೇಶ್, ಪುಟ್ಟರಾಜು, ಬಾಬು ಇದ್ದರು.