ಜಿಲ್ಲೆ

ಹೊಳಲ್ಕೆರೆ ವಿಶ್ವ ಹಿಂದು ಗಣಪತಿ ಶೋಭಾಯಾತ್ರೆ

ಚಿತ್ರದುರ್ಗ: ವಿಶ್ವ ಹಿಂದು ಮಹಾಗಣಪತಿ ಶೋಭಾಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಹೊಳಲ್ಕೆರೆ ಪಟ್ಟಣದಲ್ಲಿ ಸೆ.7 ರಂದು ಕೆಲ ಮಾರ್ಗದಲ್ಲಿ ಸಂಚಾರ ನಿಷೇಧ ಮತ್ತು ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಆದೇಶಿಸಿದ್ದಾರೆ.

ಮೆರವಣಿಗೆಯಲ್ಲಿ ಅಂದಾಜು 20 ಸಾವಿರ ಭಕ್ತರು ಭಾಗವಹಿಸುವುದರಿಂದ ರಾಷ್ಟ್ರೀಯ ಹೆದ್ದಾರಿ 369ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ 7ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಹೊಳಲ್ಕೆರೆ ಪಟ್ಟಣದ ಮುಖ್ಯ ಮತ್ತು ಇತರೆ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಿ, ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಲಾಗಿದೆ.

ಹೊಸದುರ್ಗ, ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಕಡೆಗಳಿಂದ ಹೊಳಲ್ಕೆರೆ ಪಟ್ಟಣ ಪ್ರವೇಶಿಸುವ ಎಲ್ಲ ಮಾದರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಚಿತ್ರದುರ್ಗದಿಂದ ಬರುವ ವಾಹನಗಳು ಚಿತ್ರಹಳ್ಳಿಗೇಟ್‌ನಿಂದ ಎಚ್‌ಡಿಪುರ ಮಾರ್ಗವಾಗಿ ಹಾಗೂ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ವಾಹನಗಳು ಚಿಕ್ಕಜಾಜೂರು ಹೊಳಲ್ಕೆರೆ ರೈಲ್ವೆ ನಿಲ್ದಾಣ ಮಾರ್ಗವಾಗಿ ಹೋಗ ಬೇಕಿದೆ.

ಹೊಸದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ವಾಹನಗಳು ಆವಿನಹಟ್ಟಿ, ಆರೇಹಳ್ಳಿ ರೈಲ್ವೆ ನಿಲ್ದಾಣದ ಮುಖಾಂತರ, ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋಗುವ ವಾಹನಗಳು ಅರೇಹಳ್ಳಿ ರೈಲ್ವೇ ನಿಲ್ದಾಣದ ಮುಖಾಂತರ ಪೂಣಜೂರು, ಮಲ್ಕಾಪುರ, ಚಿಕ್ಕಜಾಜೂರು, ಬಿ. ದುರ್ಗ, ಭೀಮಸಮುದ್ರ ಮಾರ್ಗವಾಗಿ ಹಾಗೂ ಶಿವಮೊಗ್ಗದಿಂದ ಹೊಸದುರ್ಗಕ್ಕೆ ಹೋಗುವ ವಾಹನಗಳು ಅರೇಹಳ್ಳಿ ರೈಲ್ವೇ ನಿಲ್ದಾಣದ ಮುಖಾಂತರ ಮಾಳೇನಹಳ್ಳಿ, ಅವಳಿಹಟ್ಟಿ, ಹೊಳಲ್ಕೆರೆ ಮಾರ್ಗದಲ್ಲಿ ಸಂಚರಿಸಬೇಕಿದೆ.

ದಾವಣಗೆರೆಯಿಂದ ಬರುವ ವಾಹನಗಳು ಮಲ್ಕಾಪುರ, ಅರೇಹಳ್ಳಿ ರೈಲ್ವೆ ನಿಲ್ದಾಣದ ಮುಖಾಂತರ ಹೊಳಲ್ಕೆರೆಗೆ ಹೋಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

----