ಸ.ದಾ. ಜೋಶಿ ಬೀದರ್
ಕೃಷಿಯಲ್ಲೇನಿದೆ ? ಅಲ್ಲಿ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಗೊಣಗುವವರು ಹೆಚ್ಚು. ಇನ್ನು ಕೃಷಿ ಬದಲು ಸಣ್ಣ ನೌಕರಿ ಮಾಡುವುದೇ ಲೇಸು ಎನ್ನುವವರಿಗೂ ಕಮ್ಮಿಯಿಲ್ಲ. ಇಂಥದರಲ್ಲಿ ಮಾಸಿಕ 1.50 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ನೌಕರಿಗೆ ವಿದಾಯ ಹೇಳಿ ಕೃಷಿಯಲ್ಲೇ ಖುಷಿ ಜತೆಗೆ ಭೂಮಿ ಬಂಗಾರವಾಗಿಸುವ ಮೂಲಕ ಕೃಷಿ ಪದವೀಧರರೊಬ್ಬರು ಹುಬ್ಬೇರಿಸುವ ಸಾಧನೆ ಮಾಡಿದ್ದಾರೆ. ಕೃಷಿ ಲಾಭಕರ ಎಂಬುದನ್ನೂ ಸಾಬೀತುಪಡಿಸಿ ಇತರರಿಗೆ ಮಾದರಿ ಎನಿಸಿದ್ದಾರೆ.
ಬೀದರ್ ತಾಲೂಕಿನ ಚಿಟ್ಟಾ ಗ್ರಾಮದ ಕಾಶಿಲಿಂಗ ವೀರಯ್ಯ ಅಗ್ರಹಾರ ಅವರ ಕೃಷಿ ಸಾಧನೆ ಇಂದಿನ ಪೀಳಿಗೆಗೆ ಪ್ರೇರಣಾದಾಯಕವಿದೆ. ಕೃಷಿ ನಾ ಒಲ್ಲೆ ಎಂದು ಇದ್ದ ಜಮೀನು ಮಾರಿಕೊಂಡು ನಗರ ಸೇರುತ್ತಿರುವವರಿಗೆ ಇವರ ಕೃಷಿ ಸೇವೆ ಹೊಸ ದಾರಿ ತೋರಿಸುವಂತಿದೆ. ಬಿಎಸ್ಸಿ ಕೃಷಿ ಪದವಿ ನಂತರ ಅಗ್ರಿ ಬಿಜಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕಾಶಿಲಿಂಗ ಅವರು, ಗಾಡ್ ಫ್ರೇ ಫಿಲಿಪ್ಸ್ ಇಂಡಿಯಾ ಕಂಪನಿಯಲ್ಲಿ (ಮೈಸೂರು, ಗುಂಟೂರಿನಲ್ಲಿ) ಮ್ಯಾನೇಜರ್ ಆಗಿದ್ದರು. ಕೈತುಂಬ ಸಂಬಳ. ಆದರೂ ಈ ಕೆಲಸ ಖುಷಿ ನೀಡಲಿಲ್ಲ. ಹತ್ತು ವರ್ಷ ಸೇವೆ ನಂತರ ನೌಕರಿಗೆ ಬೈ ಹೇಳಿ ಊರಿಗೆ ಬಂದು ಕೃಷಿಗೆ ಜೈ ಅಂದಿದ್ದಾರೆ. ತಂದೆ ವೀರಯ್ಯ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ಕಾಶಿಲಿಂಗ ಸಮಗ್ರ ಕೃಷಿ ಮತ್ತು ಬಹು ಬೆಳೆ ಪದ್ಧತಿ ಮೂಲಕ ಆರು ವರ್ಷದಲ್ಲೇ ಭೂಮಿ ಬಂಗಾರವಾಗಿಸಿದ್ದಾರೆ. ವರ್ಷಕ್ಕೆ 20 ಲಕ್ಷ ರೂ. ಆದಾಯ ಪಡೆಯುತ್ತ ಕೃಷಿ ಅತ್ಯಂತ ಲಾಭಕರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕಾಶಿಲಿಂಗ ಅವರಿಗೆ ಕೃಷಿ ಎಂದರೆ ಎಲ್ಲಿಲ್ಲದ ಪ್ರೀತಿ, ಆಸಕ್ತಿ, ಅಭಿರುಚಿ. ಹೊಲಕ್ಕೆ ಹೋಗಿ ಕೆಲಸ ಮಾಡದ ದಿನವೇ ಇಲ್ಲ. ಕೈ ಕೆಸರಾದರೆ ಬಾಯಿ ಮೊಸರು ಎಂಬಂತೆ ಸ್ವತಃ ಮೈಮುರಿದು ದುಡಿಯುತ್ತಾರೆ. ತಮ್ಮ 10 ಎಕರೆ ಜತೆಗೆ 5 ಎಕರೆ ಲೀಜ್ ಪಡೆದು (ಒಟ್ಟು 15 ಎಕರೆ) ಕೃಷಿ ಮಾಡುತ್ತಿದ್ದಾರೆ. ಕೃಷಿ ಪದವಿ ಅನುಭವದ ಭರಪೂರ ಬಳಕೆ ಮಾಡುತ್ತ, ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಇವರ ಜಮೀನು ಕೃಷಿ ಆಸಕ್ತರ ಪಾಲಿಗೆ ಮಾದರಿ ಪ್ರಯೋಗ ಶಾಲೆಯಾಗಿ ಮಾರ್ಪಟ್ಟಿದೆ. ಹೊಲಕ್ಕೆ ಬಂದವರಿಗೆ ಖುದ್ದು ಸಕ್ಸಸ್ ಫುಲ್ ಅಗ್ರಿ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಹೊಲವಿದ್ದರೆ ನೌಕರಿ ಏಕೆ ಬೇಕು ಎಂದು ಪ್ರಶ್ನಿಸುತ್ತಾರೆ ಕಾಶಿಲಿಂಗ.
ಇವರ ಜಮೀನಿನಲ್ಲಿ ಸದ್ಯ 3 ಎಕರೆ ಶುಂಠಿ, 2 ಎಕರೆ ಕಬ್ಬು, 3 ಎಕರೆ ದಾಳಿಂಬೆ, 1.5 ಎಕರೆ ಬ್ಯಾಡಗಿ ಮೆಣಸಿನಕಾಯಿ, 1.5 ಎಕರೆ ಹಿರೇಕಾಯಿ, ಅರ್ಧ ಎಕರೆ ವಿವಿಧ ಹಣ್ಣು (ಮಿಕ್ಸ್ಡ್ ಫ್ರೂಟ್ ಪ್ಲಾಂಟೇಷನ್)ಗಳಿವೆ. ಅರ್ಧ ಎಕರೆ ಪಾಲಿಹೌಸ್ ಇದ್ದು, ಈ ಭಾಗದಲ್ಲಿ ಅಪರೂಪ ಎನಿಸುವ ಹಳದಿ ಹಾಗೂ ಕೆಂಪು ಬಣ್ಣದ ಡೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಮ್) ಹಾಕಿದ್ದಾರೆ. ದಾಳಿಂಬೆ ಬಂಪರ್ ಬಂದಿದ್ದು, ಕನಿಷ್ಠ 20 ಟನ್ ಇಳುವರಿ ನಿರೀಕ್ಷೆಯಿದೆ. ವಿವಿಧ ಉತ್ಪನ್ನಗಳನ್ನು ಸ್ಥಳೀಯ ಹಾಗೂ ನೆರೆಯ ಹೈದರಾಬಾದ್, ಮುಂಬೈ, ಸೊಲ್ಲಾಪುರ, ಬೆಂಗಳೂರು ಇತರೆಡೆ ಕಳಿಸುತ್ತಿದ್ದಾರೆ. ಎರಡು ಕೊಳವೆಬಾವಿಗಳಿದ್ದು, ಪೂರ್ಣ ಜಮೀನಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ನೀರಿನ ಮಿತ ಬಳಕೆ ಮೂಲಕ ಬಂಪರ್ ಬೆಳೆ ತೆಗೆಯುತ್ತಿದ್ದಾರೆ. 12 ಕೃಷಿ ಕಾರ್ಮಿಕರಿಗೆ ಇವರಲ್ಲಿ ಕೆಲಸ ಸಿಕ್ಕಿದೆ.
ರಾಸಾಯನಿಕ ಬಳಕೆ ಕಮ್ಮಿ
ಕಾಶಿಲಿಂಗ ಅವರು ಕ್ರಮೇಣ ಬೆಳೆಗಳಿಗೆ ರಾಸಾಯನಿಕ ಬಳಕೆ ಕಮ್ಮಿ ಮಾಡುತ್ತಿದ್ದಾರೆ. ಸದ್ಯ ಅತಿ ಜರೂರಿ ಎನಿಸಿದಾಗ ಕ್ರಿಮಿನಾಶಕ, ರಸಗೊಬ್ಬರ ಬಳಸುತ್ತಿದ್ದು, ಉಳಿದಂತೆ ಜೀವಾಮೃತ ಇತರ ಸಾವಯವ, ನೈಸರ್ಗಿಕ ಪದ್ಧತಿ ಮೂಲಕ ಬೆಳೆಗಳ ರೋಗ ನಿರ್ವಹಣೆ ಮಾಡುತ್ತಿದ್ದಾರೆ. ಗೋ ಆಧರಿತ ಕೃಷಿಗೆ ಒತ್ತು ನೀಡಿದ್ದು, 3 ಗಿರ್ ತಳಿ ಆಕಳು, 2 ಸ್ಥಳೀಯ ತಳಿ ಆಕಳು, ಒಂದು ಎಮ್ಮೆ ಸಾಕಿದ್ದಾರೆ. ಗೋಮೂತ್ರ, ಸಗಣಿ ಬೆಳೆಗಳಿಗೆ ಬಳಸಲಾಗುತ್ತಿದೆ. ಎರೆಹುಳು ಗೊಬ್ಬರ ಘಟಕವೂ ಇದೆ. ಆರು ವರ್ಷದಲ್ಲಿ ಶೇ.50ರಷ್ಟು ರಾಸಾಯನಿಕ ಬಳಕೆ ಕಮ್ಮಿ ಮಾಡಿದ್ದರಿಂದ ಮಣ್ಣಿನ ಫಲವತ್ತತೆ, ವಿವಿಧ ಉತ್ಪನ್ನಗಳ ಪೌಷ್ಟಿಕಾಂಶ ಹೆಚ್ಚಿದೆ.
25 ಅಡಿ ಎತ್ತರ ಬೆಳೆದ ಕಬ್ಬು!
ಕಬ್ಬು ಬೆಳೆಯಲ್ಲಿ ಕಾಶಿಲಿಂಗ ಸಾಧನೆ ಈ ಭಾಗದ ರೈತರ ಹುಬ್ಬೇರಿಸುವಂತೆ ಮಾಡಿದೆ. 2 ಎಕರೆಯಲ್ಲಿ ವಿಎಸ್ಐ 8005 ಹಾಗೂ ಎಸ್ಎನ್ಕೆ 9293 ತಳಿ ಕಬ್ಬು ನಾಟಿ ಮಾಡಿದ್ದಾರೆ. ಕಳೆದ ವರ್ಷ ಎಕರೆಗೆ ಬರೋಬ್ಬರಿ 70 ಟನ್ ಕಬ್ಬು ತೆಗೆದಿದ್ದಾರೆ. ಈ ಕಬ್ಬು 25 ಅಡಿ ಎತ್ತರ ಬಂದಿತ್ತು. ಬಹುತೇಕ ಈ ಕಬ್ಬನ್ನು ಇವರು ರೈತರಿಗೆ ಬೀಜಕ್ಕಾಗಿ ಕೊಟ್ಟಿದ್ದಾರೆ. ಎಕರೆಗೆ 100 ಟನ್ ಕಬ್ಬು ತೆಗೆಯುವ ನಿಟ್ಟಿನಲ್ಲಿ ಪ್ರಯೋಗ ನಡೆದಿದ್ದು, ಯಶಸ್ಸು ಸಿಗುವ ವಿಶ್ವಾಸವಿದೆ ಎನ್ನುತ್ತಾರೆ ಕಾಶಿಲಿಂಗ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಇದ್ದಾಗ ಕಾಶಿಲಿಂಗ ಹೊಲಕ್ಕೆ ಭೇಟಿ ನೀಡಿ ಇವರ ಸಾಧನೆಗೆ ಬೆನ್ನು ತಟ್ಟಿದ್ದರು. ಕಾಶಿಲಿಂಗ ಸಂಪರ್ಕ ಸಂಖ್ಯೆ 72596 24068.
ನೈಸರ್ಗಿಕ ವಿಕೋಪ ಸಂಭವಿಸಿದರೆ ಸೀಮಿತ ಬೆಳೆ ಹಾಳಾಗಿ ರೈತರಿಗೆ ಸಂಕಷ್ಟ ತರಬಲ್ಲದು. ಹೀಗಾಗಿ ಸಮಗ್ರ ಹಾಗೂ ಬಹುಬೆಳೆ ಪದ್ಧತಿ ಕೃಷಿ ಅಳವಡಿಕೆ ಅಗತ್ಯ. ಅಲ್ಪ ಭೂಮಿಯಲ್ಲೂ ಈ ಪದ್ಧತಿಯಿಂದ ಕೃಷಿ ಕೈಗೊಂಡರೆ ಲಾಭ ನೀಡುತ್ತದೆ. ಯಾವುದಾದರೂ ಒಂದು ಬೆಳೆ ಕೈಹಿಡಿಯುತ್ತದೆ. ರೈತರೇ ನಿಜವಾದ ಕೃಷಿ ವಿಜ್ಞಾನಿಗಳು. ಪ್ರಯೋಗಗಳು ಸದಾ ನಡೆಯುತ್ತಿರಬೇಕು. ಒಬ್ಬ ನೌಕರ, ಉದ್ಯೋಗಿಗಿಂತ ರೈತ ಎಂದು ಕರೆಸಿಕೊಳ್ಳಲು ಹೆಮ್ಮೆ ಎನಿಸುತ್ತದೆ.| ಕಾಶಿಲಿಂಗ ಅಗ್ರಹಾರ, ಪ್ರಗತಿಪರ ರೈತ