ಹೊರನಾಡು ಅನ್ನಪೂರ್ಣೇಶ್ವರಿಗೆ ಭತ್ತದ ತೆನೆ ಅರ್ಪಿಸಿರುವುದು. 
ಜಿಲ್ಲೆ

ಹೊರನಾಡಿನಲ್ಲಿ ಹೊಸ ಅಕ್ಕಿ ಪೂಜೆ

ಎಸ್.ಎನ್.ರವೀಂದ್ರ

ಕಳಸ: ಹೊರನಾಡಿನಲ್ಲಿ ಪ್ರತಿ ವರ್ಷ ಸಂಪ್ರದಾಯದಂತೆ ನಡೆಯುವ ಹೊಸ ಅಕ್ಕಿ ಪೂಜೆ ಶುಕ್ರವಾರ ನೆರವೇರಿಸಲಾಯಿತು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅನ್ನದಾನಕ್ಕೆ ಪ್ರಾಧಾನ್ಯತೆ ಕೊಡಲಾಗುತ್ತದೆ. ಇಲ್ಲಿ ಅನ್ನವನ್ನು ಪೂಜಿಸಲಾಗುತ್ತದೆ. ಪ್ರತಿ ವಷರ್ ಧನುರ್ಮಾಸದಲ್ಲಿ ಹೊಸ ಅಕ್ಕಿಯನ್ನು ಪೂಜಿಸಲಾಗುತ್ತದೆ. ಹೊಸ ಅಕ್ಕಿ ನೈವೇದ್ಯ ದಿನಾಂಕವನ್ನು ದೇವಸ್ಥಾನದ ಧರ್ಮಕರ್ತರು ನಿಗದಿಪಡಿಸುತ್ತಾರೆ. ಧರ್ಮಕರ್ತರು ನಿಗದಿಪಡಿಸಿದ ಜಾಗದಲ್ಲಿ ಏಳು ದಿನಗಳ ಮೊದಲು ಶ್ರೀಕ್ಷೇತ್ರದ ಪ್ರಧಾನ ಅರ್ಚಕರು ಹೋಗಿ ಆ ತೋಟದಲ್ಲಿ ಬೆಳೆದ ಬಾಳೆ ಮರಕ್ಕೆ ಪೂಜಿಸಿ ಶ್ರೀಮಾತೆಯ ಪ್ರಸಾದವನ್ನು ಆ ಬಾಳೆ ಮರಕ್ಕೆ ಹಾಕಿ ಆ ಬಾಳೆಗೊನೆಯನ್ನು ಕಡಿದು ತಂದು ಗರ್ಭಗುಡಿಯಲ್ಲಿ ಇಟ್ಟಿರುತ್ತಾರೆ. ಅದು ಸರಿಯಾಗಿ ಏಳನೇ ದಿನಕ್ಕೆ ಹಣ್ಣಾಗಿರುತ್ತದೆ. ಆ ಏಳನೇ ದಿನವೇ ಶುಕ್ರವಾರ ಆಗಿರುತ್ತದೆ.

ಶುಕ್ರವಾರ ಶ್ರೀಕ್ಷೇತ್ರದಿಂದ ನಾಟಿ ಮಾಡಿರುವ ಭತ್ತವನ್ನು ಧರ್ಮಕರ್ತರು ಅವರ ಕುಟುಂಬ ಪರಿವಾರ ಮತ್ತು ಗ್ರಾಮಸ್ಥರು, ಭಕ್ತಾದಿಗಳು, ಕಟ್ಟಿಗೆ, ಕೋಲು, ವಾದ್ಯ, ಛತ್ರಿ ಸಹಿತ ಅರ್ಚಕರು ಹೋಗಿ ಗದ್ದೆಯಲ್ಲಿ ಬೆಳೆದಿರುವ ಭತ್ತದ ಪೈರಿಗೆ ಪೂಜೆ ಸಲ್ಲಿಸಿ ನಂತರ ತೆಗೆದ ಭತ್ತದ ತೆನೆಯನ್ನು ಹೊತ್ತುತಂದು ಶ್ರೀಮಾತೆಗೆ ಸಮರ್ಪಣೆ ಮಾಡಿದರು.

ಉಳಿದಂತೆ ಕೊಯ್ದ ಭತ್ತವನ್ನು ಕುಟ್ಟಿ ಅದರಿಂದ ಅಕ್ಕಿಯನ್ನು ಬೇರ್ಪಡಿಸಿ ಅದನ್ನು ಆ ದಿನ ದೇವಿಗೆ ನೈವೇದ್ಯ ರೂಪದಲ್ಲಿ ಸಮರ್ಪಣೆ ಮಾಡಿದರು. ಆ ಅಕ್ಕಿಯನ್ನು ಅಡಿ ಅಕ್ಕಿ ಎಂದು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಕೊಡಲಾಯಿತು. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಶುಕ್ರವಾರ ಹೊರನಾಡು ಗ್ರಾಮದಲ್ಲಿ ರಾತ್ರಿ 8 ಗಂಟೆ ತನಕ ಯಾರೂ ಅನ್ನವನ್ನು ಸೇವಿಸುವುದಿಲ್ಲ. ಉಪಾಹಾರ ಸೇವೆನೆ ಮಾಡಲಾಗುತ್ತದೆ. ಅಲ್ಲದೆ ದೇವಸ್ಥಾನದಲ್ಲೂ ಅನ್ನದಾನ ಇರುವುದಿಲ್ಲ. ಬದಲಾಗಿ ಉಪಾಹಾರದ ವ್ಯವಸ್ಥೆ ಮಾಡಲಾಯಿತು.

ಸಂಜೆ ಮಂಜಿನಕಟ್ಟೆಗೆ ಶ್ರೀಮಾತೆಯನ್ನು ಪಲ್ಲಕ್ಕಿಯ ಉತ್ಸವದಲ್ಲಿ ಕರೆದುಕೊಂಡು ಹೋಗಿ ಅಲ್ಲಿ ನಡೆಯುವ ಕಟ್ಟೆಪೂಜೆ, ಮಹಾಮಂಗಳಾರತಿ ನಂತರ ವಾಪಸ್ ಉತ್ಸವದಲ್ಲಿ ಕರೆತರಲಾಯಿತು.