ರಾಯಚೂರು: ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆ ಸಿಬ್ಬಂದಿಗಳಿಗೆ 3 ತಿಂಗಳ ವೇತನ ಬಾಕಿಯಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ರಾಯಚೂರು ಮತ್ತು ಮಾನ್ವಿಯ ಕಾರ್ಮಿಕರಿಗೂ 3 ತಿಂಗಳ ಬಾಕಿ ವೇತನವಾಗಬೇಕಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಿಬ್ಬಂದಿಯವರಿಗೆ ಬಾಕಿ ಇರುವ 1 ತಿಂಗಳ ವೇತನ ಕೂಡಲೇ ಪಾವತಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಬೀದರ್ ಮಾದರಿಯಲ್ಲಿ ಡಿಸಿ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಕಾರ್ಮಿಕರ ವಿವಿದೋದ್ದೇಶ ಸಹಕಾರ ಸಂಘವನ್ನು ರಚಿಸಿ ಅದರ ಮೂಲಕ ಕಾರ್ಮಿಕರ ಸೇವೆ ಪಡೆಯುವ ವ್ಯವಸ್ಥೆಯಾಗಬೇಕು. ಹೊರಗುತ್ತಿಗೆ ಖಾಸಗಿ ಏಜೆನ್ಸಿಗಳ ಶೋಷಣೆ ತಪ್ಪಿಸಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾದ್ಯಕ್ಷ ಮಹೇಶ ಚೀಕಲಪರ್ವಿ, ಕಾರ್ಯದರ್ಶಿ ಎಂ.ಗಾಯತ್ರಿ, ಪ್ರಮುಖರಾದ ಅಣ್ಣಪ್ಪ, ಬಸವರಾಜ, ಹನುಮರೆಡ್ಡಿ, ಮಹೇಶ್ವರಿ, ಅಂಬಿಕಾ, ಶಶಿಕುಮಾರ ಸೇರಿದಂತೆ ತರರಿದ್ದರು.