ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಹೊರಗಿನವರು ಮನೆಕಟ್ಟಿಕೊಳ್ಳಲು ಅವಕಾಶ ನೀಡಬಾರದು ಎಂದು ಸುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರು, ಮುಖಂಡರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು. ನಂಜಪ್ಪ, ಗುರು, ಪ್ರಭುಸ್ವಾಮಿ, ರಾಜೇಂದ್ರ ಇದ್ದರು. 
ಜಿಲ್ಲೆ

ಹೊರಗಿನವರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಬೇಡ

ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ಹೊರಗಿನವರು ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬಾರದು ಎಂದು ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರು ಹಾಗೂ ಮುಖಂಡರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಬಂಡೀಪುರ ಕಾಡಂಚಿನ ಬಾಚಹಳ್ಳಿ ಹಾಗೂ ಹುಂಡೀಪುರ ಗ್ರಾಮ ಪಂಚಾಯಿತಿಯ ಸದಸ್ಯರು ಶನಿವಾರ ಬಂಡೀಪುರ ಹುಲಿ ಯೋಜನೆಯ ಕಚೇರಿಗೆ ತೆರಳಿ, ನಮ್ಮ ಭಾಗದಲ್ಲಿ ಸ್ಥಳೀಯರಲ್ಲದೆ ಅನೇಕರು ಬಂದು ಜಮೀನನ್ನು ಖರೀದಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳ ಹೆಸರಿನಲ್ಲಿ ಅನುಮತಿ ಪಡೆದು ಅನಧಿಕೃತವಾಗಿ ವಾಣಿಜ್ಯ ಉದ್ದೇಶಗಳನ್ನು ಹೊಂದಲು ದೊಡ್ಡ ದೊಡ್ಡ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಅಲ್ಲದೆ, ತಮ್ಮ ಜಮೀನಿಗೆ ಸೋಲಾರ್ ಬೇಲಿ ಹಾಗೂ ಕಲ್ಲಿನ ಕಾಂಪೌಂಡ್‌ಗಳಂತಹ ಬೃಹತ್ ಬೇಲಿಗಳನ್ನು ತಡೆಗೋಡೆಗಳಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ. ಆನೆ ಕಾರಿಡಾರ್ ಬಂದ್ ಆಗಿದ್ದರಿಂದ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಆನೆಗಳು ಸೇರಿದಂತೆ ವನ್ಯಜೀವಿಗಳು ಗ್ರಾಮಗಳತ್ತ ದಾಳಿ ಮಾಡುತ್ತಿವೆ. ತಮ್ಮ ಜಮೀನುಗಳಿಗೆ ಬೇಲಿ ಹಾಕಿಕೊಳ್ಳಲು ಸಾಧ್ಯವಾಗದ ಸಣ್ಣ ರೈತರ ಜಮೀನುಗಳಿಗೆ ಆನೆಗಳು ದಾಳಿ ನಡೆಸಿ ಬೆಳೆ ಹಾಗೂ ಜೀವಹಾನಿ ಉಂಟು ಮಾಡುತ್ತಿವೆ.

ನಾವು ರಾತ್ರಿ ವೇಳೆ ಜಮೀನುಗಳಲ್ಲಿ ಫಸಲು ಕಾಯಲು ಹೋಗುವಾಗ ಚಿರತೆ ದಾಳಿಗಳು ಹೆಚ್ಚಾಗಿದ್ದು, ಇದರಿಂದ ಬೆಳೆದ ಫಸಲನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ, ಬಂಡೀಪುರದ ಸುತ್ತಮುತ್ತಲಿನ ಗ್ರಾಮಗಳ ಸ್ಥಳೀಯರಿಗೆ ಮಾತ್ರ ಜಮೀನು ಖರೀದಿಸಲು ಹಾಗೂ ಮನೆ ನಿರ್ಮಾಣ ಮಾಡಲು ಅನುಮತಿ ನೀಡಬೇಕು. ಈಗಾಗಲೇ ಕಟ್ಟಿರುವ ಮನೆಗಳನ್ನು ತೆರವು ಮಾಡಬೇಕು. ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳನ್ನು ಪತ್ತೆಹಚ್ಚಿ ತೆರವು ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ಮನವಿ ಪತ್ರವನ್ನು ಕಚೇರಿಯ ವ್ಯವಸ್ಥಾಪಕರಿಗೆ ಸಲ್ಲಿಸಿದರು.

ಹುಂಡೀಪುರ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಂಜಪ್ಪ, ಬಾಚಹಳ್ಳಿ ಗ್ರಾಮದ ಗುರು, ಪ್ರಭುಸ್ವಾಮಿ, ರಾಜೇಂದ್ರ, ಮಣಿಕಂಠ, ಸೆಲ್ವ ಇದ್ದರು.