ಹಾವೇರಿ: ಬೇರೆಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಉಳಿದಿರುವ ಕಾರ್ವಿುಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರು ಯಾರೇ ಇದ್ದರೂ ಆಯಾ ತಾಲೂಕು ತಹಸೀಲ್ದಾರ್ಗಳನ್ನು ಸಂರ್ಪಸಿ ಮಾಹಿತಿ ನೀಡಿದರೆ ಸರ್ಕಾರದ ಮಾರ್ಗಸೂಚಿ ಅನುಸಾರ ತಮ್ಮ ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದ್ದಾರೆ.
ಹೊರ ರಾಜ್ಯದವರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಕಳುಹಿಸಿಕೊಡುವ ಕುರಿತಂತೆ ಶುಕ್ರವಾರ ತಾಲೂಕು ತಹಸೀಲ್ದಾರ್ಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೋ ಸಂವಾದ ನಡೆಸಿದ ಅವರು, ಎರಡು ದಿನದಲ್ಲಿ ಹೊರ ರಾಜ್ಯದವರ ಮಾಹಿತಿ ಕಲೆ ಹಾಕಿ ತಮ್ಮ ಊರಿಗೆ ತೆರಳಲು ಇಚ್ಛಿಸುವವರ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದರು.
ವ್ಯಾಸಂಗ, ಅಧ್ಯಯನ, ಸಂಶೋಧನೆ ಇತರ ಕಾರಣಗಳಿಗಾಗಿ ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ವಿದ್ಯಾರ್ಥಿಗಳು, ಸಂಶೋಧಕರು, ಪ್ರವಾಸಿಗರು, ಯಾತ್ರಾರ್ಥಿಗಳು ಹಾಗೂ ವಿವಿಧ ಉದ್ಯೋಗ ಅರಸಿ ಜಿಲ್ಲೆಯಲ್ಲಿ ಉಳಿದುಕೊಂಡವರನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಡಲು ಸರ್ಕಾರ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ರಾಜ್ಯಗಳಿಗೆ ತೆರಳುವ ಕಾರ್ವಿುಕರನ್ನು ಗುರುತಿಸಿ ಕಳುಹಿಸಿಕೊಡಲು ಎಲ್ಲ ತಹಸೀಲ್ದಾರ್ಗಳು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ವಿಡಿಯೋ ಸಂವಾದಲ್ಲಿ ಎಸಿ ಡಾ. ದಿಲೀಪ ಶಶಿ, ಜಿಲ್ಲಾ ಕಾರ್ವಿುಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ತಹಸೀಲ್ದಾರ್ ಶಂಕರ ಜಿ.ಎಸ್., ಇತರರಿದ್ದರು.
ನೋಡಲ್ ಅಧಿಕಾರಿಗಳ ನೇಮಕ: ಜಿಲ್ಲೆಯಲ್ಲಿ ಉಳಿದಿರುವ ಹೊರ ರಾಜ್ಯದ ವಲಸೆ ಕಾರ್ವಿುಕರು, ವಿದ್ಯಾರ್ಥಿಗಳನ್ನು ಅವರ ಸ್ವಂತ ಸ್ಥಳಗಳಿಗೆ ಕಳುಹಿಸಿಕೊಡಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ ನಾಲವಾರ (ಮೊ. 9949864027) ಹಾಗೂ ವಾಯವ್ಯ ಸಾರಿಗೆ ಸಂಸ್ಥೆಯ ಜಿಲ್ಲಾ ವಿಭಾಗೀಯ ನಿಯಂತ್ರಣಾಕಾರಿ ವಿ.ಎಸ್. ಜಗದೀಶ (7760991900) ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.