ಚಿಕ್ಕಮಗಳೂರು: ತಾಲೂಕಿನ ಅತಿ ಪ್ರಾಚೀನ ಬಸದಿಗಳಲ್ಲಿ ಒಂದಾದ ಮತ್ತಾವರ ಗ್ರಾಮದ ಶ್ರೀ ಪಾರ್ಶ್ವನಾಥ ಬಸದಿಯ ಸುಖನಾಸಿಯಲ್ಲಿರುವ ಹೊಯ್ಸಳ ದೊರೆ ವಿನಯಾದಿತ್ಯನ ಪ್ರಕಟಿತ ದಾನ ಶಾಸನದ ಮೇಲ್ಭಾಗದ ಫಲಕದಲ್ಲಿರುವ ಎರಡು ಅಪ್ರಕಟಿತ ಪ್ರತಿಮಾ ಶಾಸನಗಳನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರAಗ ಅವರು ಶೋಧನೆ ಮಾಡಿದ್ದು, ಮತ್ತಾವರದ ಪ್ರಾಚೀನ ಜೈನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.
ಪ್ರತಿಮಾ ಶಾಸನಗಳು: ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರ ಆರಂಭ ಕಾಲದ ದೊರೆ ವಿನಯಾದಿತ್ಯ ತನ್ನ ಆಡಳಿತ ಕಾಲದಲ್ಲಿ ಮತ್ತವೂರಿನ ಪ್ರಜೆಗಳ ಮತ್ತು ಅಲ್ಲಿನ ಜೈನ ವ್ಯಾಪಾರಿ ಮಾಣಿಕ ಸೆಟ್ಟಿಯ ಆಗ್ರಹದ ಅಪೇಕ್ಷೆಯ ಮೇರೆಗೆ ಊರೊಳಗೆ ಒಂದು ಬಸದಿಯನ್ನು ಕಟ್ಟಿಸಿ ಅದರ ಪೂಜಾಸೇವಾರ್ಥಗಳ ನಿಮಿತ್ತ ಕ್ರಿ.ಶ. ೦೯-೪-೧೦೭೭ರಂದು ಭೂದಾನ ಮಾಡಿ ಮತ್ತವೂರು(ಮತ್ತಾವರ) ಪ್ರಜೆಗಳು ನೀಡಬೇಕಾಗಿದ್ದ ಮನೆದೆರೆ, ಮದುವೆದೆರೆ,ಕೊಡತಿವಣ ಹಾಗೂ ಕತ್ತರಿವಣ ಮೊದಲಾದ ತೆರಿಗೆಗಳನ್ನು ರದ್ದುಮಾಡಿ ಬಸದಿಯ ಪಕ್ಕದಲ್ಲಿ ಹಲವು ಮನೆಗಳನ್ನು ಕಟ್ಟಿಸಿ ಅದಕ್ಕೆ ರಿಷಿಹಳ್ಳಿ ಎಂದು ನಾಮಕರಣ ಮಾಡುತ್ತಾನೆ.
ಆ ಸಮಯದಲ್ಲಿ ಬಹುಶಃ ಬಸದಿಯ ಅರ್ಚಕರು ಅಥವಾ ಜೈನಗುರುಗಳಾಗಿದ್ದ ದೇವೇಂದ್ರಸೇನ ಪಂಡಿತರು ಸಹಾ ಅಲ್ಲಿರುತ್ತಾರೆ. ಆಗ ಹಾಕಿಸಿದ ದಾನಶಾಸನದಲ್ಲಿ ಒಟ್ಟು ೪೦ ಸಾಲುಗಳಿದ್ದು, ಈ ಶಾಸನ ಪ್ರಕಟವಾಗಿದೆ. ಆದರೆ ಈ ಶಾಸನದ ಅಗ್ರ ಭಾಗದಲ್ಲಿರುವ ಅರ್ಧ ಚಂದ್ರಾಕಾರದ ಫಲಕದ ಮಧ್ಯೆ ಇರುವ ತೀರ್ಥಂಕರರ ಶಿಲ್ಪದ ಎರಡೂ ಬದಿ ಮುನಿಗಳ ಹಾಗೂ ಗಡ್ಡಧಾರಿ ವ್ಯಕ್ತಿಯ ಶಿಲ್ಪಗಳಿದ್ದು ಬಲಭಾಗದಲ್ಲಿ ಪದ್ಮಾವತಿ ಹಾಗೂ ಎಡಭಾಗದಲ್ಲಿ ಹಸುಕರುಗಳ ಚಿತ್ರಣಗಳಿದ್ದು ಫಲಕದ ಮೇಲೆ ನಾಗಶಿಲ್ಪ ಮತ್ತು ಸೂರ್ಯ ಹಾಗೂ ಚಂದ್ರ ಮತ್ತು ಹಸುವಿನ ಕೊಂಬಿನ ಮಧ್ಯೆ ಅಪ್ರಕಟಿತ ತಲಾ ಎರಡು ಸಾಲಿನ ಎರಡು ಶಾಸನಗಳಿವೆ.
ಈ ಅಪ್ರಕಟಿತ ಪ್ರತಿಮಾ ಶಾಸನಗಳು ಕಲ್ಯಾಣ ಚಾಲುಕ್ಯರ ಕಾಲದ ಕನ್ನಡ ಲಿಪಿ ಯಲ್ಲಿ ಬರೆಯಲ್ಪಟ್ಟಿದ್ದು, ಈ ಶಾಸನೋಕ್ತ ವ್ಯಕ್ತಿಗಳು ಹಾಗೂ ಉಬ್ಬುಶಿಲ್ಪಗಳು ಅಂದಿನ ಮತ್ತವೂರಿನ ಬಸದಿ ಗುರುಗಳಾದ ದೇವೇಂದ್ರ ಸೇನ ಪಂಡಿತರು ಹಾಗೂ ಜೈನವ್ಯಾಪಾರಿ ಮಾಣಿಕಸೆಟ್ಟಿಯರವೇ ಆಗಿವೆ ಎಂಬುದು ಕೆಳಗಿನ ಪ್ರಕಟಿತ ಶಾಸನ ಭಾಗದ ಅಧ್ಯಯನದಿಂದ ತಿಳಿದು ಬಂದಿದೆ ಎಂಬುದು ಪಾಂಡುರAಗ ಅವರ ಅಭಿಪ್ರಾಯವಾಗಿದೆ.
ಈ ಶಾಸನ ಶೋಧ ಕ್ಷೇತ್ರಕಾರ್ಯದಲ್ಲಿ ಸಹಕಾರ ನೀಡಿದ ಬಸದಿಯ ಅರ್ಚಕರಾದ ಶಾಂತಕುಮಾರ್ ಇಂದ್ರ ಹಾಗೂ ಟಿ.ಪಿ.ಪ್ರಭಾಕರ್ ನಾಯಕ್ ಹಾಗೂ ಶಾಸನ ಅಧ್ಯಯನದ ಮಾರ್ಗದರ್ಶಕರಾದ ಮೈಸೂರಿನ ಶಾಸನ ತಜ್ಞ ಎಚ್.ಎಂ.ನಾಗರಾಜರಾವ್ ಅವರಿಗೆ ಸಂಶೋಧಕ ಪಾಂಡುರAಗ ಕೃತಜ್ಞತೆ ಸಲ್ಲಿಸಿದ್ದಾರೆ.