ಜಿಲ್ಲೆ

ಹೊನ್ನಾದೇವಿ ದೇಗುಲದಲ್ಲಿ ದೀಪೋತ್ಸವ


ಚನ್ನರಾಯಪಟ್ಟಣ: ತಾಲೂಕಿನ ಬಾಳಗಂಚಿ ಗ್ರಾಮದೇವತೆ ಶ್ರೀ ಹೊನ್ನಾದೇವಿ ಸನ್ನಿಧಿಯಲ್ಲಿ ಕಡೇ ಕಾರ್ತೀಕ ಮಾಸದ ಪ್ರಯುಕ್ತ ಅಮವಾಸ್ಯೆ ಯಂದು ಬುಧವಾರ ರಾತ್ರಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.


ದೀಪೋತ್ಸವದ ಪ್ರಯುಕ್ತ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ವಿವಿಧ ಬಗೆಯ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು ಹಾದಿ ಬೀದಿಗಳು ರಂಗೋಲಿಯಿಂದ ಕಂಗೊಳಿಸಿದವು. ಬಾಳೆಕಂದು ಕಟ್ಟಿ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು.


ಗ್ರಾಮದ ಮಹಿಳೆಯರು ಸಂಜೆ ಸುಮಾರಿನಲ್ಲಿಯೇ ಎಣ್ಣೆ, ಬತ್ತಿ ಹಾಕುವ ಮೂಲಕ ಸಾವಿರಾರು ದೀಪಗಳನ್ನು ಸಿದ್ಧಪಡಿಸಿದ್ದರು. ಕಾರ್ತಿಕ ಮಾಸದ ಕಡೇ ಸೋಮವಾರ ದಿನದಂದು ದೀಪೋತ್ಸವದ ಆಚರಣೆಯಾದರೆ ಈ ಗ್ರಾಮದಲ್ಲಿ ನಂತರದ ಅಮವಾಸ್ಯೆಯಂದು ಆಚರಿಸುವುದು ವಾಡಿಕೆಯಾಗಿದೆ.


ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರಿಂದ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಹೊನ್ನಾದೇವಿಯನ್ನು ಒಡವೆ-ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರಿಸಲಾಗಿದ್ದು ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.


ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ಹೂವು, ಹಣ್ಣು-ಕಾಯಿ ಸಲ್ಲಿಸಿ ಗಂಧ ಕರ್ಪೂರ ಬೆಳಗಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಜತೆಗೆ ಹೆಣ್ಣುಮಕ್ಕಳು ಶ್ರೀ ಹೊನ್ನಾದೇವಿಗೆ ದೀಪದಾರತಿ ಬೆಳಗಿದರು.
ಶ್ರೀ ಹೊನ್ನಾದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೀಪೋತ್ಸವಕ್ಕೆ ಚಾಲನೆ ದೊರೆಯಿತು. ಹಿರಿಯ ತಾಯಂದಿರು ಹಾಗೂ ಹೆಣ್ಣುಮಕ್ಕಳು ಸೋಬಾನೆ ಪದ ಹಾಡುತ್ತ ದೇಗುಲದ ಅಂಕಣ, ಮೆಟ್ಟಿಲು, ಕಿಟಕಿ ಹಾಗೂ ಕಾಂಪೌಂಡ್ ಮೇಲೆ ಸುತ್ತುವರಿದಂತೆ ಸಾವಿರರು ದೀಪಗಳನ್ನು ಬೆಳಗಿಸಿದರು.


ದೇವಿಗೆ ಮಹಾ ಮಂಗಳಾರತಿ ಬೆಳಗಿಸಿದ ಬಳಿಕ ಪ್ರಸಾದ ವಿನಿಯೊಗ ನಡೆಯಿತು. ಬಾಳಗಂಚಿ, ಹೊನ್ನಶೆಟ್ಟಿಹಳ್ಳಿ, ಹೊನ್ನಾದೇವಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.