ಜಿಲ್ಲೆ

ಹೊನ್ನಮಾರನಹಳ್ಳಿಯಲ್ಲಿ ಕಳಸೋತ್ಸವ


ಚನ್ನರಾಯಪಟ್ಟಣ: ತಾಲೂಕಿನ ಹೊನ್ನಮಾರನಹಳ್ಳಿ ಗ್ರಾಮದಲ್ಲಿ ಶ್ರೀ ಶನೇಶ್ಚರಸ್ವಾಮಿಯ ಕಳಸ ಹಾಗೂ 12 ಮಂದಿ ದೇವತೆಗಳ ಉತ್ಸವ ಬುಧವಾರ ವೈಭವದಿಂದ ನಡೆಯಿತು.


ಮುಂಜಾನೆಯೇ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ಬಾಳೆಕಂದು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ದೇವರಿಗೆ ಕ್ಷೀರಾಭಿಷೇಕ, ಗಂಗಾಪೂಜೆ, ನಾಗದೇವತಾ ಹಾಗೂ ವಿವಿಧ ಪೂಜಾ ವಿದಿವಿಧಾನಗಳು ನೆರವೇರಿದವು.


ಹೊನ್ನಮಾರನಹಳ್ಳಿಯ ಶ್ರೀ ಶನೇಶ್ವರಸ್ವಾಮಿ, ಆಳು ಕೋಟೆಮಾರಮ್ಮ, ಕಂಚಿನಕೋಟೆ ಆಯ್ಯಪ್ಪಸ್ವಾಮಿ, ಯಾಳನಹಳ್ಳಿಯ ಆಂಜನೇಯಸ್ವಾಮಿ, ಪಿರಿಯಾಪಟ್ಟಣದಮ್ಮ, ತುರುವೆಕೆರೆ ಕಾಳಿಕಾಂಬ, ಬಿಂಡಿಗನವಿಲೆಯ ಲಕ್ಷ್ಮೀದೇವಿ, ಯಲ್ಲಾದಳ್ಳಿ ದೊಡ್ಡಮ್ಮ, ಚಿಕ್ಕಮ್ಮ, ಗೌಡರಹಳ್ಳಿ ಮಸಣಿಕಮ್ಮ ಹಾಗೂ ಕಬ್ಬಿನಕೆರೆಯ ಬಸವಣ್ಣ ದೇವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ಉತ್ಸವ ಮೂರ್ತಿಗಳು ಮತ್ತು ದೇವಾಲಯದ ಸಂಸ್ಥಾಪಕರಾದ ನಿಂಗಪ್ಪ ಸ್ವಾಮೀಜಿಯ ಬಾವಚಿತ್ರದೊಂದಿಗೆ ಕಳಸದ ಮೆರೆವಣಿಗೆ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಭಕ್ತರು ಹಣ್ಣು-ಕಾಯಿ ಅರ್ಪಿಸಿ ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು.


ಮಧ್ಯಾಹ್ನ ಶನೇಶ್ವರಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಇತರೆ ಗ್ರಾಮಗಳಿಂದ ಆಗಮಿಸಿದ್ದ ದೇವತೆಗಳಿಗೆ ಮಡಿಲ ಅಕ್ಕಿ ಅರ್ಪಿಸಲಾಯಿತು. ವಿವಿಧ ದೇವತೆಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ದೀಪೋತ್ಸವ, ಕೆಂಡ ಕೊಂಡ ಹಾಯಲಾಯಿತು.


ರಾಜವಿಕ್ರಮ ನಾಟಕ ಮತ್ತು ಹರಿಕತೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರ ಸಹಕಾರದಿಂದ 2 ದಿನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.