ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕು ಹೊಟ್ಯಾಪುರ ಹಿರೇಮಠದ ಪೀಠಾಧ್ಯಕ್ಷ ಶ್ರೀ ಗಿರಿ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ (61) ಸೋಮವಾರ ಬೆಳಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಯಕೃತ್ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು, ಮಾ.5ರಂದು ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದರು. ಗುಣಮುಖರಾಗಿ ಮಾ.20 ರಂದು ಆಸ್ಪತ್ರೆಯಿಂದ ಮರಳಿದ್ದರು.
ಆನಂತರ ಜುಲೈ 11ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸಿಲಿಲ್ಲ. ದಿನೇ ದಿನೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗುತ್ತ ಹೋಯಿತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ವಿಧಿವಶರಾದರು.
ಗ್ರಾಮದ ಪಾರ್ವತಮ್ಮ ಮತ್ತು ಎಚ್.ಎಂ.ಚಂದ್ರಶೇಖರಯ್ಯ ಇವರ ದ್ವಿತೀಯ ಪುತ್ರನಾಗಿ 6-6-1963ರಂದು ಜನಿಸಿದ ಇವರು, ತಮ್ಮ ವಿದ್ಯಾಭ್ಯಾಸವನ್ನೆಲ್ಲ ಮಂಗಳೂರಿನಲ್ಲಿಯೇ ಮುಗಿಸಿದ್ದಾರೆ. ಬಿಎ ಪದವೀಧರರಾದ ಶ್ರೀಗಳು ಪಟ್ಟಾಭಿಷೇಕಕ್ಕೂ ಮುಂಚಿತವಾಗಿ ಮಂಗಳೂರು ಸಿಟಿ ಕಾರ್ಪೊರೇಷನ್ ನಲ್ಲಿ ದ್ವಿತೀಯ ದರ್ಜೆಯ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. 24 ಮಾ. 2002ರಲ್ಲಿ ಉಜ್ಜನಿ ಪೀಠದ ಆಗಿನ ಶ್ರೀಗಳಾದ ಲಿಂ.ಮರಳು ಸಿದ್ಧ್ದೇಶ್ವರ ಶಿವಾಚಾರ್ಯರು ಪಟ್ಟಾಭಿಷೇಕ ಮಾಡಿದ್ದರು.
ಶ್ರೀಮಠಕ್ಕೆ ಮಂಗಳೂರಿನ ಬಸವನಗುಡಿಯಲ್ಲಿ ಒಂದು ಶಾಖಾಮಠ ಸಹ ಇದ್ದು, ಶ್ರೀಗಳು ಎರಡೂ ಮಠಗಳ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ವರ್ಷದ ಹೆಚ್ಚು ಕಾಲ ಹೊಟ್ಯಾಪುರದ ಹಿರೇಮಠದಲ್ಲಿಯೇ ಇರುತ್ತಿದ್ದರು.
ಇಂದು ಶ್ರೀಗಳಿಗೆ ಅಂತಿಮ ವಿಧಿವಿಧಾನ
ಉಜ್ಜನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ, ರಾಜ್ಯದ ವಿವಿಧ ಮಠಗಳ ಶ್ರೀಗಳ ಉಪಸ್ಥಿತಿಯಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.
ಶ್ರೀಗಳ ಅಂತಿಮ ದರ್ಶನಕ್ಕಾಗಿ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಮಂಗಳವಾರ ಮಧ್ಯಾಹ್ನ 3 ಗಂಟೆಯವರೆಗೂ ಹೊಟ್ಯಾಪುರ ನೂತನ ಶ್ರೀಮಠದ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಅಂತಿಮ ವಿಧಿ ವಿಧಾನಗಳು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಹೊಟ್ಯಾಪುರ ಶ್ರೀಮಠದ ಮೂಲಗದ್ದುಗೆಯ ಸಮೀಪ ನೆರವೇರಲಿವೆ ಎಂದು ಮಠದ ಮೂಲಗಳು ತಿಳಿಸಿವೆ.
ಕ್ರಿಯಾ ಸಮಾಧಿ:
ಲಿಂ. ಶ್ರೀಗಳು ಕಳೆದ ಮೂರು ತಿಂಗಳು (17-04-2023ರಂದು) ಮುಂಚಿತವಾಗಿಯೇ ತಮ್ಮ ಸಾವಿನ ಸುಳಿವು ಅರಿತಿದ್ದರು ಅನ್ನಿಸುತ್ತದೆ. ಹಾಗಾಗಿಯೇ ಗ್ರಾಮದ ಮೂಲಮಠದ ಸಮೀಪ ಕವಲೇ ದುರ್ಗದ ಹಿರಿಯ ಶ್ರೀಗಳ ಸಮಾಧಿ ಬಳಿಯೇ ಕ್ರಿಯಾ ಸಮಾಧಿಯೊಂದನ್ನು ಮಾಡಿಕೊಂಡಿರುವ ವಿಚಾರ ಭಕ್ತರಿಗೆ ಅಚ್ಚರಿ ರೂಪದಲ್ಲಿ ತಿಳಿದುಬಂದಿದೆ.
ರಂಭಾಪುರಿ ಜಗದ್ಗುರುಗಳ ಸಂತಾಪ
ನ್ಯಾಮತಿ: ಹೊನ್ನಾಳಿ ತಾಲೂಕು ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಗಿರಿಸಿದ್ಧೇಶ್ವರ ಶಿವಾಚಾರ್ಯರು ವೀರಶೈವ ಧರ್ಮ ಸಂಸ್ಕೃತಿ ಪ್ರಸಾರ ಮಾಡುತ್ತಾ ಈ ಭಾಗದ ಭಕ್ತ ಸಂಕುಲಕ್ಕೆ ಸನ್ಮಾರ್ಗ ದರ್ಶನ ಮಾಡುತ್ತಿದ್ದರು. ಸ್ನೇಹ ಜೀವಿಗಳಾಗಿದ್ದ ಅವರು ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಅಗಲಿಕೆ ನೋವನ್ನುಂಟು ಮಾಡಿದೆ. ಅವರ ಪವಿತ್ರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಶ್ರೀ ಮಠದ ಭಕ್ತರಿಗೆ ನೀಡಲಿ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.