ಬಾಳೆಹೊನ್ನೂರು: ಫೆಂಗಲ್ ಚಂಡಮಾರುತದ ಪರಿಣಾಮ ಉಂಟಾಗಿರುವ ಅಕಾಲಿಕ ಮಳೆ ಅಡಕೆ, ಕಾಫಿ ಹಾಗೂ ಭತ್ತದ ಬೆಳೆಗಾರರಲ್ಲಿ ಆತಂಕ ತಂದಿದ್ದು, ಮಳೆಯಿಂದಾಗಿ ಹಲವು ಕಡೆಗಳಲ್ಲಿ ಫಸಲು ನಷ್ಟದ ಭೀತಿ ಆರಂಭಗೊಂಡಿದೆ.
ಮಂಗಳವಾರದ ವೇಳೆಗೆ ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಡಿಮೆಗೊಂಡಿದ್ದರೂ ಮೋಡದ ವಾತಾವರಣ ಮುಂದುವರಿದಿದೆ. ಸೋಮವಾರ ಸಂಜೆ ಮಳೆ ಬಿರುಸುಗೊಂಡಿದ್ದು, ಸೋಮವಾರ ರಾತ್ರಿಯಿಡೀ ಹದವಾದ ಪ್ರಮಾಣದಲ್ಲಿ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಅಡಕೆ ಕೊಯ್ಲು ಆರಂಭಗೊಂಡಿದ್ದು, ಅಡಕೆ ಕೊಯ್ಲು ಬೆಳೆಗಾರರ ಮನೆಗಳಲ್ಲಿ ಬಿರುಸಿನಿಂದ ನಡೆಯುತ್ತಿದೆ. ಸೋಮವಾರ ಚಂಡಮಾರುತದ ಪರಿಣಾಮ ಆರಂಭಗೊಂಡಿರುವ ಅಕಾಲಿಕ ಮಳೆಯಿಂದಾಗಿ ಅಡಕೆ ಸಂಸ್ಕರಣೆ ಮಾಡಲು ಬೆಳೆಗಾರರಿಗೆ ತೊಂದರೆ ಉಂಟಾಗಿದೆ.
ಎರಡು ದಿನಗಳ ಹಿಂದೆ ಸುಲಿದು ಬೇಯಿಸಿದ ಅಡಕೆಯನ್ನು ಬಿಸಿಲಿನಲ್ಲಿ ಒಣಗಿಸಲು ಸಾಧ್ಯವಾಗದೆ ಫಂಗಸ್ ಬರಲು ಆರಂಭಗೊಂಡಿದ್ದು, ಇದರಿಂದಾಗಿ ಗುಣಮಟ್ಟ ಕಾಪಾಡಿಕೊಳ್ಳಲು ಬೆಳೆಗಾರರು ಹರಸಾಹಸ ಪಡುವಂತಾಗಿದೆ. ಅಡಕೆ ಗುಣಮಟ್ಟ ಇಲ್ಲದಿದ್ದಲ್ಲಿ ಬೆಲೆ ಕಡಿಮೆಯಾಗಲಿದ್ದು, ಇದೂ ರೈತರಿಗೆ ಹೊಡೆತ ಬೀಳಲಿದೆ.
ಹಲವು ಕಡೆಗಳಲ್ಲಿ ಬೆಳೆಗಾರರು ಬೇಯಿಸಿದ ಅಡಕೆಯನ್ನು ಒಣಗಿಸಲು ಬೆಂಕಿಯ ಮೊರೆ ಹೋಗಿದ್ದಾರೆ. ಹೊಗೆತಟ್ಟಿ ಮಾಡಿ ಅಡಕೆಯನ್ನು ಒಣಗಿಸಲು ಮುಂದಾಗಿದ್ದಾರೆ.
ಹಲವು ಕಡೆಗಳಲ್ಲಿ ಕಾಫಿ ಹಣ್ಣಾಗಿದ್ದು, ಮಳೆಯ ಪರಿಣಾಮ ಕಾಫಿ ಹಣ್ಣುಗಳು ಉದುರುವ ಆತಂಕ ಎದುರಾಗಿದೆ. ಇದರೊಂದಿಗೆ ಅಕಾಲಿಕ ಮಳೆಗೆ ಗಿಡಗಳಲ್ಲಿ ಕಾಫಿ ಹೂವು ಸಹ ಅರಳುವ ಸಾಧ್ಯತೆ ಇದೆ. ಇದರಿಂದಾಗಿ ಈಗಿರುವ ಕಾಯಿಗಳನ್ನು ಕೊಯ್ಲು ಮಾಡುವುದು ಅಸಾಧ್ಯವಾಗಲಿದೆ. ಮುಂದಿನ ಬಾರಿಯ ಕಾಫಿ ಫಸಲಿಗೂ ಸಮಸ್ಯೆ ಆಗಲಿದೆ.
ಧಾರಾಕಾರ ಮಳೆಯಿಂದ ತೆನೆಬಿಟ್ಟಿರುವ ಭತ್ತ ಹಲವು ಕಡೆಗಳಲ್ಲಿ ನೆಲಕ್ಕೆ ಬಾಗಿದ್ದು, ಇದರಿಂದಾಗಿಯೂ ರೈತರಿಗೆ ನಷ್ಟ ಉಂಟಾಗಿದೆ. ಒಟ್ಟಾರೆಯಾಗಿ ಅಕಾಲಿಕ ಮಳೆ ಎಲ್ಲೆಡೆ ರೈತರಿಗೆ ಸಂಕಷ್ಟ ತಂದೊಡ್ಡಿದೆ.