ಹನೂರು: ಪಟ್ಟಣದಲ್ಲಿ ಮಂಗಳವಾರ ಸುರಿದ ಮಳೆಗೆ ಲೊಕ್ಕನಹಳ್ಳಿಗೆ ತೆರಳುವ ಗೌತಮ್ ಶಾಲೆಯ ಬಳಿ ನಿರ್ಮಾಣವಾಗಿರುವ ಮುಖ್ಯ ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಈ ರಸ್ತೆಯು ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಗೌತಮ್ ಶಾಲೆಗೆ ಸುತ್ತಮುತ್ತಲ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ರಸ್ತೆಯು ಕಳೆದ ಒಂದು ವರ್ಷದಿಂದ ಸಂಪೂರ್ಣ ಹದಗೆಟ್ಟಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಮಳೆ ಬಂದ ವೇಳೆ ನೀರು ಹಲವು ದಿನಗಳವರೆಗೆ ನಿಲ್ಲುತ್ತದೆ. ಜಲ್ಲಿಕಲ್ಲುಗಳು ರಸ್ತೆಗೆ ಹರಡಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆಯುತ್ತಲೇ ಇದೆ. ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ರಸ್ತೆ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ಬಸವರಾಜು ಒತ್ತಾಯಿಸಿದ್ದಾರೆ.