ದಾಬಸ್‌ಪೇಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳನ್ನು ಬೆಸೆದಿರುವ ಚೆನ್ನೈ ಎಕ್ಸ್ ಪ್ರೆಸ್‌ವೇಗೆ ನೇರ ಸಂಪರ್ಕ ಸಾಧಿಸಿರುವ ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರ ವಿಭಜಕದಲ್ಲಿ ಹಳದಿ ಬಣ್ಣದ ಗಂಟೆ ಹೂಗಳು ಅರಳಿ ರಸ್ತೆಯ ಸೊಬಗು ಹೆಚ್ಚಿಸಿವೆೆ.
ಪ್ರಯಾಣಿಕರು, ಚಾಲಕರಿಗೆ ಹೂಗಳು ಕಣ್ಣಿಗೆ ಮುದ ನೀಡುತ್ತಿದ್ದು, ವಾಹನಗಳನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಸೆಲ್ಫಿ ತೆಗೆದುಕೊಳ್ಳುವುದು ಹಾಗೂ ವಿಡಿಯೋ ಮಾಡಿ ಖುಷಿಪಡುವುದು ಹೈವೈ ಪ್ರಯಾಣಿಕರ ನಿತ್ಯದ ಸಂಗತಿಯಾಗಿದೆ. ದಾಬಸ್‌ಪೇಟೆಯಿಂದ ಹೊಸಕೋಟೆಗೆ ಸಂಪರ್ಕಿಸುವ 84 ಕಿಮೀ ಉದ್ದಕ್ಕೂ ಹೆದ್ದಾರಿ ಆಜುಬಾಜು ಹಾಗೂ ಮಧ್ಯದಲ್ಲಿ ಗಂಟೆ ಹೂವಿನ ಗಿಡಗಳು ಪ್ರಯಾಣಿಕರ ಮನಸೆಳೆಯುತ್ತಿವೆ.
ಬೈಗ್ನೋನಿಯೆನ್ಸೀಸ್ ಜಾತಿಗೆ ಸೇರಿದ ಈ ಹೂವು ಟೆಕೋಮಾ ಸಾನ್ಟ್, ಯೆಲ್ಲೋ ಟ್ರಂಪೆಡ್ ಬುಶ್, ಯೆಲ್ಲೋ ಬೆಲ್ಸ್ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುತ್ತದೆ. ಚಿಟ್ಟೆ, ಜೇನು ಹುಳಗಳು ಹಾಗೂ ಬಿಸಿಲಹಕ್ಕಿಗಳನ್ನು ಗಂಟೆ ಹೂ ತನ್ನೆಡೆಗೆ ಆಕರ್ಷಿಸುತ್ತದೆ.