ದೇವದುರ್ಗ ತಾಲೂಕು ಮ್ಯಾಕಲದೊಡ್ಡಿಯಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ಜಿ.ಕುಮಾರ ನಾಯಕ ಅವರನ್ನು ಸನ್ಮಾನಿಸಲಾಯಿತು. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಭು ಶಂಕರ್, ತಾಪಂ ಇಒ ಬಸವರಾಜ ಹಟ್ಟಿ, ಸಂಘದ ಅಧ್ಯಕ್ಷೆ ಲಕ್ಷ್ಮಿ ಚನ್ನಬಸವ, ಲಕ್ಷ್ಮಿ ಸಿದ್ದಪ್ಪ ದೊಡ್ಡಮನಿ, ಕರೆಪ್ಪಗೌಡ ಮೇಟಿಗೌಡ್ರು ಇತರರಿದ್ದರು. 
ಜಿಲ್ಲೆ

ಹೈನುಗಾರಿಕೆಯಿಂದ ಮಹಿಳೆಯರ ಸ್ವಾವಲಂಬನೆ

ದೇವದುರ್ಗ: ಗ್ರಾಮೀಣ ಭಾಗದ ಮಹಿಳೆಯರು ಹೈನುಗಾರಿಕೆ ಮಾಡಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬಹುದು ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ಜಾಲಹಳ್ಳಿ ಹೋಬಳಿಯ ಮ್ಯಾಕಲದೊಡ್ಡಿ ಗ್ರಾಮದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಬಂದ ಮೇಲೆ ಸಣ್ಣ, ಅತಿಸಣ್ಣ, ಬಡ ರೈತರು, ಮಧ್ಯಮ ರೈತರಿಗೆ ಕೃಷಿ, ಹೈನುಗಾರಿಕೆ, ಗೃಹ ಕೈಗಾರಿಕೆ ಮಾಡಲು ಅನುಕೂಲವಾಗಿದೆ. ರೈತರ ಜತೆಗೆ ಮಹಿಳೆಯರು ಹೈನುಗಾರಿಕೆಯನ್ನು ಉಪಕಸುಬು ಮಾಡಿಕೊಂಡು ಜೀವನ ಸಾಗಿಸಬೇಕು ಎಂದರು.

ಸಂಘದ ಕಾರ್ಯದರ್ಶಿ ಅರ್ಪಿತಾ ಹನುಮಂತ್ರಾಯ ಮೇಟಿ ಮಾತನಾಡಿ, ಮಹಿಳೆಯರು ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ಉದ್ಯೋಗ ಪಡೆಯಬಹುದು. ಎಮ್ಮೆ ಸಾಕಣೆ ಮಾಡಿ ಒಕ್ಕೂಟಕ್ಕೆ ಹಾಲು ಮಾರಾಟ ಮಾಡಿದರೆ ಉತ್ತಮ ಬೆಲೆ ಪಡೆಯಬಹುದು. ಸರ್ಕಾರ ಕೂಡಾ ಪ್ರತಿಲೀಟರ್‌ಗೆ 5 ರೂ. ಸಹಾಯಧನ ಕೊಡುತ್ತದೆ. ಗ್ರಾಮೀಣ ಭಾಗದ ಪ್ರತಿ ಕುಟುಂಬದ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಬೇಕು ಎಂದರು.

ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪ್ರಭು ಶಂಕರ್, ತಾಪಂ ಇಒ ಬಸವರಾಜ ಹಟ್ಟಿ, ಸಂಘದ ಅಧ್ಯಕ್ಷೆ ಲಕ್ಷ್ಮೀ ಚನ್ನಬಸವ, ಉಪಾಧ್ಯಕ್ಷೆ ಲಕ್ಷ್ಮಿ ಸಿದ್ದಪ್ಪ ದೊಡ್ಡಮನಿ, ಮುಖಂಡರಾದ ಕರೆಪ್ಪಗೌಡ ಮೇಟಿಗೌಡ್ರು, ಸಿದ್ದರಾಮರೆಡ್ಡಿ, ರಾಜಣ್ಣ ತಳ್ಳಳ್ಳಿ, ಮಲ್ಲಿಕಾರ್ಜುನ ಐಕೂರು, ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ, ಹನುಮಂತ್ರಾಯಗೌಡ ಮೇಟಿ, ಹನುಮಂತ್ರಾಯ ಸಂಗಣ್ಣ ಇತರರಿದ್ದರು.